ವಿಜಯಪುರ : ವಿಜಯಪುರ ನಗರದ ಶಾಂತಿನಗರ ನಿವಾಸಿಗಳನ್ನ ಬೆಚ್ಚಿ ಬೀಳಿಸಿದ ಘಟನೆಯೊಂದು ನಡೆದಿದೆ. ನಿನ್ನೆ ಮಟ ಮಟ ಮದ್ಯಾಹ್ನವೇ ಖದೀಮರ ತಂಡವೊಂದು ಶಾಂತಿನಗರದ ಜನರಲ್ಲಿ ಅಶಾಂತಿಯ ಜೊತೆ ಆತಂಕ ಮೂಡಿಸಿದೆ. ಫಿನಾಯಿಲ್ ಮಾರುವ ವೇಷದಲ್ಲಿ ಬಂದ ಖದೀಮರ ತಂಡ ಇಡೀ ಮನೆ ಮಂದಿಗೆಲ್ಲ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿದೆ. ಪ್ರೀತಿಯಿಂದ ಸಾಕಿದ್ದ ನಾಯಿಗೆ ವಿಷ ಉಣಿಸಿ ಕೊಂದು ಹಾಕಿದ್ದಾರೆ. ಶಾಂತಿನಗರದಲ್ಲಿ ವಾಸವಿರೋ, ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮನೆ ಮನೆಗೆ ಫಿನಾಯಿಲ್ ಮಾರಾಟ ಮಾಡಲು ಬಂದಿದ್ದ ಯುವತಿ ಕಳ್ಳತನದ ಸ್ಕೆಚ್ ಹಾಕಿದ್ದಾಳೆ. ಮನೆಯ ಹೊರಗಡೆ ಕರೆದಾಗ ಬಂದ ಯುವಕನಿಗೆ ಮತ್ತು ಬರೋ ವಾಸನೆ ತೋರಿಸಿ ಪ್ರಜ್ಞೆ ತಪ್ಪಿಸಿದ್ದಾಳೆ. ಆ ನಂತರ ಮನೆಯೊಳಗೆ ನುಗ್ಗಿದ್ದ ಯುವತಿ, ಮನೆಯಲ್ಲಿ ಆಗಷ್ಟೆ ಮದ್ಯಾಹ್ನದ ಊಟ ಮಾಡಿ ಮಲಗಿದ್ದ ಸುನಂದಾ ತೋಳಬಂದಿ ಹಾಗೂ ಅವರ ಪತಿ ವಾಸುದೇವ ತೋಳಬಂದಿಯವರಿಗೆ ಮತ್ತು ಬರಿಸೋ ಔಷಧಿ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಮನೆಯಲ್ಲಿರೋ ಚಿನ್ನ ಬೆಳ್ಳಿ ದೋಚಿದ್ದಾರೆ..
ಸಧ್ಯ ಈ ಘಟನೆಯಲ್ಲಿ ಮನೆಯ ತಿಜೋರಿಯಲ್ಲಿದ್ದ ಸುಮಾರು 2.20 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿಯ ಆಭರಣ, 2ಮೊಬೈಲ್ ದೋಚಿದ್ದಾರೆ. ಈ ಕುರಿತು ವಿಜಯಪುರದ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊರೋನಾ ಆತಂಕದ ನಡುವೆಯೂ ವಿಜಯಪುರದ ಶಾಂತಿನಗರದ ಜನತೆಗೆ ಈ ಘಟನೆ ಮತ್ತಷ್ಟು ಆತಂಕಕ್ಕೆ ದೂಡಿದೆ. ಇನ್ನು ಈ ಕುರಿತು ಪೋಲಿಸ್ ಇಲಾಖೆ ಕೂಡಾ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳಿಂದ ಪ್ರಕಟಣೆಯ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ..
ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ ಬೀಡು ಬಿಟ್ಟ ಮಹಿಳಾ ಮಣಿಗಳ ತಂಡವೊಂದು ಜನರಲ್ಲಿ ಆತಂಕ ಸೃಷ್ಟಿಸಿದೆ, ಇನ್ನೂ ಜನರು ಕೂಡಾ ಈ ನಿಟ್ಟಿನಲ್ಲಿ ಮುಂಜಾಗೃತೆ ವಹಿಸುವದು ಅಗತ್ಯವಾಗಿದೆ. ಈ ಮಹಿಳಾ ಮಣಿಗಳ ತಂಡ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಸಹಿತ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದ್ದು ಜನರು ಮುಂಜಾಗೃತೆ ವಹಿಸಬೇಕಾಗಿದೆ..