Sunday, January 19, 2025

ನಮಗೂ ಬದುಕು ಬೇಕು

ಚಿಕ್ಕಮಗಳೂರು : ಮನುಷ್ಯನ ಜೀವನವೇ ಹಾಗೇ ಬದುಕು ಕಟ್ಟಿಕೊಳ್ಳಲು ಪ್ರತಿನಿತ್ಯ ಹೋರಾಡಬೇಕು. ಹೆಣಗಾಡಬೇಕು. ಯಾಕಂದ್ರೆ, ಮನೋರೋಗಿ ತಂದೆ ಅನಾರೋಗ್ಯಕ್ಕೀಡಾದ ತಾಯಿ ಈ ಮಧ್ಯೆ ವಿದ್ಯಾಭ್ಯಾಸ ಜೊತೆ ಸುಂದರ ಬದುಕಿಗಾಗಿ ಎರಡು ಹೆಣ್ಣು ಮಕ್ಕಳ ನಿರಂತರ ಹೋರಾಟ. ಈ ಮಕ್ಕಳೆಂದರೆ ಆ ದೇವರಿಗೂ ಕೋಪವೋ ಏನೋ. ಬಡತನದ ಬೇಗೆಯಲ್ಲಿ ಬೆಂದು ಹೋಗಿರುವ ಈ ಕುಟುಂಬ ಸರಿಯಾದ ಆಸರೆ ಇಲ್ಲದೇ ಪ್ರತಿನಿತ್ಯ ಬದುಕು ಕಟ್ಟಿಕೊಳ್ಳಲು ಹೋರಾಡ್ತಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೇ ನೋಡಿ.

ಹೌದು ಮಾನಸಿಕ ಅಸ್ವಸ್ಥನಾಗಿ ನೆಲ ಹಿಡಿದು, ಕೊಳಕು ಹೊದಿಕೆ ಹೊದ್ದು ಕೊಟ್ಟಿಗೆಯಂತಹ ಜಾಗದಲ್ಲಿ ಮಲಗಿರುವ ತಂದೆ. ಈಗಲೋ ಆಗಲೋ ಬೀಳುವ ಗುಡಿಸಿಲಿನಲ್ಲಿ ಬದುಕುತ್ತಿರುವ ತಾಯಿ. ಸೂರಿಲ್ಲದ ಸೂರಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಇಬ್ಬರೂ ಹೆಣ್ಣು ಮಕ್ಕಳು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದ ಸೋಮನ ಕಟ್ಟೆ ಗ್ರಾಮದಲ್ಲಿರುವ ಬಡ ಕುಟುಂಬದ ದಾರುಣ ಕಥೆ ಇದು. ಈ ಗ್ರಾಮದಲ್ಲಿ ವಾಸವಾಗಿರುವ ಗಿರಿ ಜನ ಪಂಗಡಕ್ಕೆ ಸೇರಿರುವ ಈ ಕುಟುಂಬವನ್ನು ನೋಡಿದರೇ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ. ಈ ಹಿಂದೇ ಎಲ್ಲರಂತೆ ಆರೋಗ್ಯವಾಗಿದ್ದ ಮನೆಯ ಮಾಲೀಕ ಲೋಕೇಶ್ ಮತ್ತು ಆತನ ಪತ್ನಿ ಸರೋಜ ಎಲ್ಲರಂತೆ ಜೀವನ ಮಾಡಿಕೊಂಡು ತಮ್ಮದೇ ಪ್ರಪಂಚದಲ್ಲಿ ಇದ್ದರು. ಇವರಿಗೆ ಇಬ್ಬರೂ ಮುದ್ದಾದ ಹೆಣ್ಣು ಮಕ್ಕಳಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಂದು ಅಕ್ಕ-ಪಕ್ಕದವರ ಮನಸ್ಸು ಗೆದ್ದಿದ್ದರು. ಆದರೆ, ಅದ್ಯಾಕೋ ಆ ದೇವರಿಗೆ ಈ ಕುಟುಂಬದ ಮೇಲೆ ಮುನಿಸು, ದಿನ ಕಳೆದಂತೆ ಮಾನಸಿಕವಾಗಿ ಕುಗ್ಗಿ ಹೋದ ಮನೆಯ ಮಾಲೀಕ ಲೋಕೇಶ್ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದು ಮಲಗಿದ್ದಲ್ಲೇ ಮಲಗಿದ್ದಾರೆ.

ಲೋಕೇಶ್ ಪತ್ನಿ ಇವರ ಆರೋಗ್ಯ ಸರಿ ಮಾಡಲು ಹಲವಾರು ಆಸ್ವತ್ರೆಗಳಿಗೆ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇರುವ ಮುರುಕಲು ಮನೆಯಲ್ಲಿ ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಸಲಹಲು ಪ್ರಾರಂಭ ಮಾಡಿದ್ದು, ನೆಮ್ಮದಿಯ ಜೀವನ ನಡೆಸಲು ಆ ವಿಧಿ ಮಾತ್ರ ಇವರಿಗೆ ಬಿಡುತ್ತಿಲ್ಲ. ಈಗ ಲೋಕೇಶ್ ಕಾಲಿನ ಸ್ವಾಧೀನ ಕಳೆದು ಹೋಗಿದ್ದು, ಮನಸ್ಸಿನ ಸ್ಥಿಮಿತ ಇಲ್ಲದಂತಾಗಿದೆ. ಲೋಕೇಶ್ ಮನೆಯಲ್ಲಿರುವ ಪಾತ್ರೆಗಳನ್ನು ಹೊರಗಡೆ ಬಿಸಾಡಿ ಹೆಂಡತಿ ಮಕ್ಕಳನ್ನು ಹೊರ ತಳ್ಳಿದ್ದಾನೆ. ಮನೆಯ ಪಕ್ಕದಲ್ಲಿಯೇ ಇರುವ ಜಾಗದಲ್ಲಿ ಒಂದು ಪೇಪರ್ ಜೋಪಡಿ ಹಾಕಿಕೊಂಡು ಸರೋಜಾ ತನ್ನ ಇಬ್ಬರೂ ಹೆಣ್ಣು ಮಕ್ಕಳ ಜೊತೆ ಜೀವನ ಮಾಡುತ್ತಿದ್ದು, ಈ ಯೋಚನೆಯಲ್ಲಿ ಇವರ ಆರೋಗ್ಯವೂ ಹದಗೆಟ್ಟಿದೆ. ಸರಿಯಾದ ದಾರಿ, ಶೌಚಾಲಯ, ಸ್ನಾನದ ಗೃಹ, ಮಲಗಲು ಜಾಗವಿಲ್ಲದೇ ಈ ಕುಟುಂಬ ನರಳಾಟ ನಡೆಸುತ್ತಿದೆ. ಕಾಡಿನ ಮಧ್ಯೆ ಹಾವು, ಜಿಗಣೆ, ಹುಳ ಹುಪ್ಪಡಿಗಳ ಮಧ್ಯೆ ನರಕದ ಜೀವನ ಈ ಹೆಣ್ಣು ಮಕ್ಕಳು ನಡೆಸುತ್ತಿದ್ದಾರೆ. ಇಬ್ಬರೂ ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡುವ ಆಸಕ್ತಿ ಇದೆ. ಇಬ್ಬರೂ ಮಕ್ಕಳಾದ ಕೀರ್ತನಾ , ಹೊರನಾಡು ಪ್ರೌಡಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರೆ, ಇನ್ನೊಬ್ಬಳು ಸ್ವಂಧನಾ ಪರಿಚಯಸ್ಥರ ಮನೆಯಲ್ಲಿದ್ದುಕೊಂಡು ಬೆಳ್ತಂಗಡಿಯಲ್ಲಿ ಪಿಯುಸಿ ಓದುತ್ತಿದ್ದಾಳೆ. ಸ್ವಂದನ ಎಸ್.ಎಸ್.ಎಲ್.ಸಿ ಯಲ್ಲಿ ಶೇ 75 ರಷ್ಟು ಅಂಕ ಪಡೆದಿದ್ದು, ಇನ್ನಷ್ಟು ಓದುವ ಆಸಕ್ತಿ ಹೊಂದಿದ್ದಾಳೆ

ಒಟ್ಟಾರೆ, ಲಾಕ್ ಡೌನ್ ವೇಳೆ ಸ್ವಂದನಾಳ ಕೆಲಸವೂ ಹೋಗಿದ್ದು, ಈಗ ಮನೆಗೆ ಬಂದೂ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾ, ದಿನ ನಿತ್ಯ ಸಿಗುವ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಆನ್ ಲೈನ್ ತರಗತಿಗಳು ಕೂಡ ಪ್ರಾರಂಭ ವಾಗಿದ್ದು, ಮೊಬೈಲ್ ತೆಗೆದುಕೊಳ್ಳಲು ಇವರ ಬಳಿ ಹಣವಿಲ್ಲ. ಆದರೆ ಓದಲೇ ಬೇಕು ಎಂಬ ಉತ್ಸಾಹ ಈ ಇಬ್ಬರೂ ಹೆಣ್ಣು ಮಕ್ಕಳಲ್ಲಿ ದಿನದಿಂದಾ ದಿನಕ್ಕೆ ಹೆಚ್ಚಾಗುತ್ತಿದ್ದು, ಯಾರಾದರೂ ದಾನಿಗಳು ಈ ಕುಟುಂಬಕ್ಕೆ ಸಹಾಯ ಮಾಡಿದರೇ ಈ ಜೀವಗಳು ಬದುಕು ಕಟ್ಟಿಕೊಳ್ಳೋದಕ್ಕೆ ಸಹಕಾರಿಯಾಗಲಿದೆ…

ಸಚಿನ್ ಶೆಟ್ಟಿ ಚಿಕ್ಕಮಗಳೂರು..

RELATED ARTICLES

Related Articles

TRENDING ARTICLES