Sunday, January 19, 2025

ಶಿವಮೊಗ್ಗದಲ್ಲಿ 2,000 ಸಮೀಪಿಸಿದ ಕೊರೋನಾ ಸೋಂಕಿತರ ಸಂಖ್ಯೆ!

ಶಿವಮೊಗ್ಗ : ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಎರಡು ಸಾವಿರ ಸನಿಹಕ್ಕೆ ಬಂದು ತಲುಪಿದೆ.  ಭಾನುವಾರ 30 ಪಾಸಿಟಿವ್ ಪ್ರಕರಣ ಕಂಡುಬರುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1982 ಕ್ಕೆ ಹೆಚ್ಚಳವಾಗಿದ್ದರೆ, ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶಿವಮೊಗ್ಗ- 23, ತೀರ್ಥಹಳ್ಳಿ- 02, ಶಿಕಾರಿಪುರ- 02, ಹೊಸನಗರ-01 ಹಾಗೂ ಹೊರ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಆಗಮಿಸಿದ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಗುಣಮುಖರಾದ 39 ಮಂದಿ ಸೇರಿದಂತೆ ಇಲ್ಲಿಯವರೆಗೆ ಒಟ್ಟು 1062 ಜನ ಗುಣಮುಖರಾಗಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಪಾಸಿಟಿವ್‌ಗಿಂತ ಇಂದು ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

ಅದರಂತೆ, ಜಿಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ಶತಕ ಬಾರಿಸುತ್ತಲೇ ಇತ್ತು. ಅದರೆ ಭಾನುವಾರ ಪಾಸಿಟಿವ್ ಪ್ರಕರಣದಲ್ಲಿ ಇಳಿಮುಖವಾಗಿದ್ದು, ಕೇವಲ 30 ಮಂದಿಗೆ ಸೋಂಕು ತಗುಲಿರುವ ವರದಿ ಬಂದಿದೆ. ಇನ್ನು ಜಿಲ್ಲೆಯಲ್ಲಿ 879 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 242 ಮಂದಿ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 513 ಮಂದಿ ಕೊವಿಡ್ ಆರೈಕೆ ಕೇಂದ್ರದಲ್ಲಿ, 48 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 76 ಮಂದಿ ಮನೆಯಲ್ಲಿ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಒಟ್ಟು 385 ಕಂಟೈನ್ಮೆಂಟ್ ವಲಯಗಳಿವೆ.

ಇಂದಿನ ಹೆಲ್ತ್ ಬುಲೆಟಿನ್ ವರದಿಯಂತೆ, ಸೋಂಕಿತರ ಸಂಖ್ಯೆ ಕಡಿಮೆಯಿದ್ದರೂ, ಸೋಂಕಿನಿಂದ ಮತ್ತೆ ಮೂವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇದುವರೆಗೆ ಒಟ್ಟು 40 ಮಂದಿ ಕೊವಿಡ್​ ನಿಂದಾಗಿ ಮರಣ ಹೊಂದಿದ್ದಾರೆ.  ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ 52 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಭದ್ರಾವತಿ ನಗರದ 42 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಸೋಂಕಿತ ವ್ಯಕ್ತಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ದಾಖಲಾದ ನಂತರ ಅವರಿಗೆ ಕೊವಿಡ್ ಪತ್ತೆಯಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

RELATED ARTICLES

Related Articles

TRENDING ARTICLES