ಮಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ ಮಾಜಿ ನಗರಾಭಿವೃದ್ಧಿ ಹಾಗು ವಸತಿ ಸಚಿವ, ಮಂಗಳೂರು ಶಾಸಕ ಯುಟಿ ಖಾದರ್ ಸ್ವಯಂ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ. ಖುದ್ದು ಅವರೇ ಈ ಕುರಿತು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, “ಕೆಲವು ದಿನಗಳವರೆಗೆ ನಾನು ಕ್ವಾರೆಂಟೈನ್ ಆಗುತ್ತಿದ್ದು, ಎಲ್ಲಾ ಕಾರ್ಯಕ್ರಮಗಳನ್ನ ಮುಂದೂಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಶನಿವಾರ ಸಂಜೆಯಷ್ಟೇ ಖಾದರ್ ಆಪ್ತರೂ ಆದ ಐವನ್ ಡಿಸೋಜಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ಇದರಿಂದಾಗಿ ಯುಟಿ ಖಾದರ್ ಅವರು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಜುಲೈ 31 ರಂದು ದಕ್ಷಿಣ ಕನ್ನಡ ಪ್ರವಾಸ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೂ ಐವನ್ ಸಂಪರ್ಕದಲ್ಲಿದ್ದರು. ಮಾತ್ರವಲ್ಲದೇ ಹಲವು ಜಿಲ್ಲಾ ನಾಯಕರು ಉಪಸ್ಥಿತರಿದ್ದು, ದಿನವಿಡೀ ಕಾರ್ಯಕ್ರಮದಲ್ಲಿ ಹಾಜರಿದ್ದ ಐವನ್ ಅವರೆಲ್ಲರ ಸಂಪರ್ಕಕಕ್ಕೂ ಬಂದಿದ್ದರು. ಇದೀಗ ಅವರ ಸಂಪರ್ಕದಲ್ಲಿದ್ದ ನಾಯಕರು ಒಬ್ಬೊಬ್ಬರಾಗಿ ಕ್ವಾರೆಂಟೈನ್ಗೆ ಒಳಗಾಗುವ ಸಾಧ್ಯತೆ ಇದೆ. ಜೊತೆಗೆ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲೂ ಐವನ್ ಡಿಸೋಜಾ ಇದ್ದ ಕಾರಣ ಪತ್ರಕರ್ತರಲ್ಲೂ ಆತಂಕ ಮನೆ ಮಾಡಿದೆ.
-ಇರ್ಷಾದ್ ಕಿನ್ನಿಗೋಳಿ