ಬೆಂಗಳೂರು : ಆಯುರ್ವೇದ ಔಷಧಿ ಮೂಲಕ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ ಅಂತ ಬಹಿರಂಗವಾಗಿ ಹೇಳಿಕೊಂಡಿರುವ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರಿಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ( BMCRI) ನೋಟಿಸ್ ಜಾರಿ ಮಾಡಿದೆ.
ಕೊರೋನಾ ರೋಗಿಗಳ ಚಿಕಿತ್ಸೆ ಸಂಬಂಧ ಅನಧಿಕೃತ ಮಾಹಿತಿಯನ್ನು ನೀವು ಪ್ರಕಟಿಸಿದ್ದೀರಿ ಅಂತ ಬಿಎಂಸಿಆರ್ಐ ನೈತಿಕ ಸಮಿತಿ ಆಕ್ಷೇಪ ಎತ್ತಿದ್ದು, ಸಾರ್ವಜನಿಕವಾಗಿ ವಾಸ್ತವ ಸಂಗತಿಗಳನ್ನು ತೆರೆದಿಡಿ ಎಂದು ನೋಟಿಸ್ ನೀಡಿದೆ.
BMCRI ನೋಟಿಸ್ನಲ್ಲಿ ಏನಿದೆ?
“ಕೊವಿಡ್-19 ರೋಗಿಗಳಿಗೆ ನಿರ್ದಿಷ್ಟವಾದ ಆರೈಕೆಯ ಜೊತೆಗೆ ಆಡ್ ಅನ್ ಥೆರಪಿ (ಹೆಚ್ಚುವರಿ) ಗಾಗಿ ನಿಮ್ಮ ಭೌಮ್ಯ ಮತ್ತು ಸ್ಮಾಥಿಯಾ ಎಂಬ ಎರಡು ಮಾತ್ರೆಗಳ ದಕ್ಷತೆ ಹಾಗೂ ಸುರಕ್ಷತೆಯನ್ನು ಮೌಲ್ಯಮಾಪನ ನಡೆಸಲು ಕ್ಲಿನಿಕಲ್ ಟ್ರಯಲ್ಗಾಗಿ ಬಿಎಂಸಿಆರ್ ಅನ್ನು ಸಂಪಕರ್ಕಿಸಿದ್ರಿ. ಅದರ ಪ್ರಯೋಗ ಇನ್ನೂ ಕೂಡ ಪ್ರಾಥಮಿಕ ಹಂತದಲ್ಲಿದೆ. ಅಲ್ಲದೆ ಬಿಎಂಸಿಆರ್ಐನ ನೈತಿಕ ಸಮಿತಿಗೆ ಯಾವ್ದೇ ಫಲಿತಾಂಶ ಸಲ್ಲಿಸಿಲ್ಲ ಅನ್ನೋದು ನಿಮ್ಗೆ ತಿಳಿದಿದೆ. ಈ ರೀತಿಯ ವಾಸ್ತವ ಸ್ಥಿತಿಯಲ್ಲಿ ನೀವು ಸಾರ್ವಜನಿಕವಾಗಿ ಪ್ರಯೋಗ ಯಶಸ್ವಿಯಾಗಿದೆ ಅಂತ ಹೇಳಿಕೊಂಡಿದ್ದೀರಿ. ಇದು ಜವಬ್ದಾರಿ ಮೀರಿದ ನಡುವಳಿಕೆಯಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ರೀತಿಯ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವಾಗ ಸೂಕ್ತ ಪ್ರಾಧಿಕಾರಿಗಳಿಂದ ಅನುಮತಿ ಪಡೆದಿರಬೇಕು ಅನ್ನೋದು ನಿಮಗೆ ತಿಳಿದಿದೆ. ನೀವು ನೀಡಿರುವ ಮಾಹಿತಿ ಬಹಳ ಸೂಕ್ಷ್ಮವಾಗಿದ್ದು, ನೀವು ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನೀವು ತಕ್ಷಣ ಮಾಧ್ಯಮಗಳನ್ನು ಕರೆದು ವಾಸ್ತವ ಪರಿಸ್ಥಿತಿ ಬಗ್ಗೆ ಸ್ಪಷ್ಟನೆ ನೀಡಲು ಕೋರಲಾಗಿದೆ. ಇಲ್ಲವಾದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ನಿಮ್ಮ ನಡುವಳಿಕೆಗಾಗಿ ನಾವು ಈ ಪ್ರಯೋಗವನ್ನು ಕೂಡಲೇ ಸ್ಥಗಿತಗೊಳಿಸಬೇಕಾಗುತ್ತದೆ’’ ಎಂದು BMCRI ನೈತಿಕ ಸಮಿತಿ ಅಧ್ಯಕ್ಷರು ನೋಟಿಸ್ ನೀಡಿದ್ದಾರೆ.