ವಿಜಯಪುರ: ಕೊರೋನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಆರೋಪ ವಿಜಯಪುರದಲ್ಲಿ ಕೇಳಿ ಬಂದಿತ್ತು. ನಗರದ ಚಾಲುಕ್ಯ ಬಡಾವಣೆಯ ನಿವಾಸಿ ಪಾಸಿಟಿವ್ ಪೀಡಿತನ ಮನೆಗೆ ಹಾಲು, ಪೇಪರ್ ಹಾಕಲು ಹಾಗೂ ಮನೆಯ ಕೆಲಸಗಾರರಿಗೆ ಹೋಗಲು ಸ್ಥಳೀಯರು ಅಡಚಣೆ ಮಾಡುತ್ತಿದ್ದಾರೆಂಬ ಆರೋಪವನ್ನು ಸೋಂಕಿತನ ಕುಟುಂಬಸ್ಥರು ಮಾಡಿದ್ದರು. ಇದರಿಂದ ತೀವ್ರವಾಗಿ ನೊಂದಿರುವ ಸೋಂಕಿತನ ಪತ್ನಿ, ಪ್ರಧಾನಿ ಕಾರ್ಯಾಲಯ, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಟ್ವೀಟ್ ಮೂಲಕ ದೂರು ನೀಡಿದ್ದರು. ಮನೆಯಲ್ಲಿ ನನ್ನ ಪತಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಪಾಸಿಟಿವ್ ಪೀಡಿತನಿಗೆ ಮನೆಯ ಮೊದಲ ಮಹಡಿಯಲ್ಲಿ ಐಸೋಲೇಟ್ ಮಾಡಿದ್ದೇವೆ, ಮಾತ್ರೆ ಸೇರಿದಂತೆ ಇತರೆ ಔಷಧ ಆರೋಗ್ಯ ಇಲಾಖೆ ನೀಡಿದೆ. ಕುಟುಂಬದ ಇತರೆ ಆರು ಜನರು ಕೆಳ ಮನೆಯಲ್ಲಿ ವಾಸವಾಗಿದ್ದೇವೆ. ಆದರೆ ಮನೆಯ ಸುತ್ತಮುತ್ತಲ ಜನರ ವರ್ತನೆಯಿಂದಾಗಿ ನಾವು ಬೇಸತ್ತಿದ್ದೇವೆಂದು ಆರೋಪ ಮಾಡಿದ್ದರು.
ಮಹಾರಾಷ್ಟ್ರದ ಪುನಾದಲ್ಲಿ ಇಂಜನಿಯರ್ ಆಗಿದ್ದ ಸೋಂಕಿತ ಕಳೆದ ಎರಡು ತಿಂಗಳುಗಳ ಹಿಂದೆ ಮನೆಗೆ ವಾಪಸ್ ಮರಳಿದ್ದರು. ಆದರೆ ಕಳೆದ ಗುರುವಾರ ಕುಟುಂಬದ ಸದಸ್ಯರು ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಲಾಗಿ 7 ಜನರ ಪೈಕಿ ಓರ್ವನಿಗೆ ಪಾಸಿಟಿವ್ ಬಂದಿತ್ತು. ಆತನಿಗೆ ಮನೆಯ ಮೊದಲ ಮಹಡಿಯಲ್ಲಿ ಇಟ್ಟು ಪ್ರತ್ಯೇಕವಾಗಿ ಚಿಕಿತ್ಸೆ ಕೊಡಿಸುತ್ತಿದ್ದರು ಸ್ಥಳಿಯರ ವರ್ತನೆಯಿಂದ ಬೇಸತ್ತು ಹೋಗಿದ್ದರು. ಯಾವಾಗ ಸೋಂಕಿತನ ಪತ್ನಿ ಟ್ವೀಟ್ ಮೂಲಕ ತನ್ನ ಅಳಲು ತೋರಿಕೊಂಡ್ಲೋ ಈ ಕುರಿತು ಪವರ ಟಿವಿ ವಿಸ್ತ್ರುತ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಸ್ಥಳಕ್ಕೆ ಆಗಮಿಸಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿ ನಿಮ್ಮ ಜೊತೆ ನಾವಿದ್ದೇವೆ ಭಯ ಪಡಬೇಡಿ ಎಂದು ತಿಳಿ ಹೇಳಿದರು. ಅಲ್ಲದೆ ಬಹಿಷ್ಕಾರ ಹಾಕಿದ್ದ ಸ್ಥಳೀಯರಿಗೂ ತಿಳುವಳಿಕೆ ನೀಡಿದರು. ಅಗತ್ಯ ವಸ್ತುಗಳ ಪೂರೈಕೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಾನಗರ ಪಾಲಿಕರ ಅಧಿಕಾರಿಗಳು ವಹಿಸಿಕೊಂಡರು. ಕೊರೋನಾ ಅಟ್ಟಹಾಸದಿಂದ ಕಂಗೆಟ್ಟ ಕುಟುಂಬಕ್ಕೆ ಬಹಿಷ್ಕಾರವೆಂಬುದು ಗಾಯದ ಮೇಲಿನ ಬರೆಯಂತಾಗಿತ್ತು. ಆದ್ರೆ ಪವರ ಟಿವಿ ವರದಿಯ ನಂತರ ಅಧಿಕಾರಿಗಳು ಎಚ್ಚೆತ್ತು ಕುಟುಂಬದ ಸಂಕಷ್ಟಕ್ಕೆ ಸ್ಪಂದನೆ ನೀಡಿ ಮಾನವೀಯತೆ ಮೆರೆದಿದ್ದಾರೆ.