ಶಿವಮೊಗ್ಗ: ಆರ್.ಎಂ. ಮಂಜುನಾಥ್‍ಗೌಡರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರೆಯುವ ನೈತಿಕತೆ ಇಲ್ಲ. ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ನಿರ್ದೇಶಕ ಹಾಗೂ ಉಪಾಧ್ಯಕ್ಷ ಚನ್ನವೀರಪ್ಪ ಆಗ್ರಹಿಸಿದ್ದಾರೆ. ಇಂದು ಸುದ್ಧಿಗೋಷ್ಟಿ ನಡೆಸಿ ಆರೋಪ ಮಾಡಿದ ಚೆನ್ನವೀರಪ್ಪ, ಬ್ಯಾಂಕಿನ ಬಂಗಾರದ ಹಗರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಗೌಡ, ಆರೋಪಿಯಾಗಿದ್ದಾರೆ ಎಂದು ಇಲಾಖಾ ವರದಿ ಹೇಳಿದೆ. ಸ್ವ ಹಿತಾಸಕ್ತಿಗಾಗಿ ಅಧ್ಯಕ್ಷರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರನ್ನು ನಿರ್ದೇಶಕ ಸ್ಥಾನದಿಂದಲೇ ವಜಾಗೊಳಿಸಲಾಗಿತ್ತು. ಅವರು ಈಗ ಹೈಕೋರ್ಟ್‍ಗೆ ಹೋಗಿ ತಾತ್ಕಾಲಿಕವಾಗಿ ತಡೆಯಾಜ್ಞೆ ತಂದಿದ್ದಾರೆಯಷ್ಟೆ. ಹಾಗಂತ ಆರೋಪದಿಂದ ಮುಕ್ತವಾಗಿಲ್ಲ. ತನಿಖೆ ಮುಂದುವರೆಯುತ್ತಿದ್ದು, ಅವರು ಅಧಿಕಾರದಲ್ಲಿದ್ದರೆ ತನಿಖೆ ದಿಕ್ಕುತಪ್ಪು ಸಾಧ್ಯತೆ ಇರುವುದರಿಂದ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಚೆನ್ನವೀರಪ್ಪ ಆಗ್ರಹಿಸಿದ್ದಾರೆ.
ಅಲ್ಲದೇ, ಆರ್.ಎಂ. ಮಂಜುನಾಥಗೌಡರು ಆಡಳಿತ ಮಂಡಳಿತ ಗಮನಕ್ಕೆ ಬಾರದೆ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಾಂತರ ರೂ. ಸಾಲ ನೀಡಿದ್ದಾರೆ. ಈ ಬಗ್ಗೆ ನಿರ್ದೇಶಕರುಗಳು ವಿರೋಧ ವ್ಯಕ್ತಪಡಿಸಿದ್ದರೂ ಕೂಡ ಅವರು ಸಾಲ ನೀಡಿದ್ದಾರೆ. ಬ್ಯಾಂಕಿನ ಎಷ್ಟೋ ವಿಷಯಗಳು ಸಭೆಯಲ್ಲಿ ಚರ್ಚೆಯಾಗುತ್ತಿದ್ದರೂ ಕೂಡ ಅದನ್ನು ಅವರು ಮೀಟಿಂಗ್ ಕಡತಕ್ಕೆ ಸೇರಿಸುತ್ತಲೇ ಇರಲಿಲ್ಲ. ನಂತರ ತಮ್ಮ ಪರವಾಗಿ ಇರುವಂತೆ ಬರೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ. ಅವರ ಮೇಲೆ 65 ರ ಶಾಸನ ಬದ್ಧ ಅಡಿಯಲ್ಲಿ ಇಲಾಖೆ ತನಿಖೆ ಮುಂದುವರೆಯುತ್ತಿದೆ. ನ್ಯಾಯಾಲಯ ಕೇವಲ ಮಧ್ಯಾಂತರ ಆದೇಶ ಮಾತ್ರ ನೀಡಿದೆ. ಅದು ಅಂತಿಮ ತೀರ್ಪಲ್ಲಾ. ಅಲ್ಲದೇ, ಜಿಲ್ಲೆಯ ಅನೇಕ ಸಹಕಾರ ಸಂಘಗಳು ಈಗ ನಷ್ಟದಲ್ಲಿವೆ ಮತ್ತು ಬ್ಯಾಂಕಿಗೆ ಬರಬೇಕಾದ ಹಣ ಕೂಡ ಬಂದಿಲ್ಲ. ಸುಮಾರು 26 ಕೋಟಿಗೂ ಹೆಚ್ಚು ಸಾಲ ವಸೂಲಿಯೂ ಆಗಿಲ್ಲ. ಅವರು ಕರ್ತವ್ಯ ಲೋಪ ಎಸಗಿರುವುದು ಈಗಾಗಲೇ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಮತ್ತು ಅವರ ಮೇಲಿನ ಆರೋಪ ಕ್ರಿಮಿನಲ್ ಕೋರ್ಟ್‍ನಲ್ಲಿ ಮುಗಿದಿದ್ದರೂ, ಕೂಡ ಸಿವಿಲ್ ಕೋರ್ಟ್‍ನಲ್ಲಿ ಬಾಕಿ ಇದೆ. ಈ ಎಲ್ಲಾ ಕಾರಣಗಳಿಂದ ಆರ್.ಎಂ. ಮಂಜುನಾಥಗೌಡರಿಗೆ ಬ್ಯಾಂಕಿನ ಅಧ್ಯಕ್ಷರಾಗಿ ಮುಂದುವರೆಯುವ ಯಾವ ನೈತಿಕತೆಯೂ ಇಲ್ಲ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.