ಮಂಗಳೂರು : ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರಾವಳಿಗೆ ಭೇಟಿ ನೀಡಿ ತೆರಳಿರುವ ಡಿಕೆ ಶಿವಕುಮಾರ್ ಅವರಿಗೆ ಇದೀಗ ಕೊರೊನಾ ಆತಂಕ ಶುರುವಾಗಿದೆ. ಕಾರಣ, ನಿನ್ನೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಡಿಕೆ ಶಿವಕುಮಾರ್ ಜೊತೆಗೆ ದಿನವಿಡೀ ಇದ್ದ ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಅವರಿಗೆ ಇಂದು ಸಂಜೆ ವೇಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನಿನ್ನೆ ಸಂಜೆ ಡಿಕೆಶಿ ಧರ್ಮಸ್ಥಳಕ್ಕೆ ತೆರಳಿದ ನಂತರ, ಜ್ವರ ಲಕ್ಷಣ ಹೊಂದಿದ ಪತ್ನಿ ಡಾ. ಕವಿತಾ ಜೊತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ ಐವನ್ ಸ್ವ್ಯಾಬ್ ಮಾದರಿ ನೀಡಿ ಬಂದಿದ್ದರು. ಅದಾದ ಬಳಿಕವೂ ಐವನ್ ಡಿಸೋಜಾ ಅವರು ಇಂದು ಮತ್ತೆ ಡಿಕೆಶಿ ಅವರ ಜೊತೆ ಹಿರಿಯ ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ಶೆಟ್ಟಿ ಮನೆಗೂ ಹಾಗೂ ವಿಮಾನ ನಿಲ್ದಾಣಕ್ಕೂ ಬಿಟ್ಟು ಬಂದಿದ್ದರು. ಅದಾದ ಬಳಿಕವೂ ಕೆಲವೊಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಐವನ್ ಡಿಸೋಜಾ ಅವರು ‘ಪವರ್ ಟಿವಿ’ ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಇಂದು ಸಂಜೆ ವೇಳೆಗೆ ಐವನ್ ಹಾಗೂ ಅವರ ಪತ್ನಿಗೂ ಸೋಂಕು ದೃಢಪಟ್ಟಿದ್ದು, ಇಬ್ಬರೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಇದೀಗ ಅವರ ಜೊತೆಗಿದ್ದ ಡಿಕೆ ಶಿವಕುಮಾರ್, ಮಾಜಿ ಸಚಿವರಾದ ಯುಟಿ ಖಾದರ್, ರಮಾನಾಥ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಈಗಾಗಲೇ ಕೊರೊನಾ ಗುಣಮುಖರಾದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಹಲವು ಕಾಂಗ್ರೆಸ್ ಮುಖಂಡರಿಗೆ ಕೊರೊನಾ ಆತಂಕ ಶುರುವಾಗಿದ್ದು, ನಾಯಕರು ಕ್ವಾರೆಂಟೈನ್ ಪಾಲಿಸ್ತಾರ ಅನ್ನೋದು ಕಾದು ನೋಡಬೇಕಿದೆ.
ಇರ್ಷಾದ್ ಕಿನ್ನಿಗೋಳಿ, ಪವರ್ ಟಿವಿ, ಮಂಗಳೂರು