ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಇದರಿಂದ ಸಾರ್ವಜನಿಕರು ಮತ್ತಷ್ಟು ಗಾಬರಿಗೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ, ಆಕ್ಸಿಜನ್, ಮಾಸ್ಕ್, ಸ್ಯಾನಿಟೈಜರ್ ಇಲ್ಲ, ಕೊನೆಗೆ ದಾದಿಯರೂ ಇಲ್ಲ. ಅಷ್ಟೇಕೆ ಡಾಕ್ಟರ್‍ಗಳೂ ಇಲ್ಲ, ಎಲ್ಲ ಇಲ್ಲಗಳ ನಡುವೆ ಮೆಗ್ಗಾನ್ ಆಸ್ಪತ್ರೆ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇಲ್ಲಿನ ವೈದ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದಕ್ಕೆ ರಾಜ್ಯಸರ್ಕಾರವೇ ಹೊಣೆಯಾಗಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿದೆ ಮತ್ತು ಕೊರೋನಾ ಪರೀಕ್ಷೆ ತುಂಬಾ ವಿಳಂಬವಾಗುತ್ತಿದೆ. ಗಂಟಲು ದ್ರವ ಪರೀಕ್ಷೆಯ ವರದಿ ಒಂದು ಗಂಟೆಯೊಳಗೆ ಪ್ರಕಟವಾಗುವಂತಿರಬೇಕು. ಇದರ ಜೊತೆಗೆ ಕೋವಿಡ್ ನೆಪದಲ್ಲಿ ಸಾಮಾನ್ಯ ಕಾಯಿಲೆಗಳಿಂದ ಬರುವ ವೃದ್ದರು, ಹೊರರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಪತ್ರಿಕಾ ಹೇಳಿಕೆಯಲ್ಲಿಯೇ ಮುಳುಗಿದ್ದು, ಇಡೀ ಜಿಲ್ಲೆಯನ್ನು ಮರೆತುಬಿಟ್ಟಿದ್ದಾರೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕಮಾಡುವ ಪ್ರಕ್ರಿಯೆಯಲ್ಲಿ ತಲ್ಲಿನರಾಗಿದ್ದಾರೆಯೇ ಹೊರತು ಮೆಗ್ಗಾನ್ ಆಸ್ಪತ್ರೆಯಲ್ಲಿ ಏನಿದೆ, ಎನಿಲ್ಲ ಎಂದು ನೋಡುತ್ತಿಲ್ಲ. ಅವರು ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವರ ವಿರುದ್ದ ಕಾಂಗ್ರೆಸ್ ತೀವ್ರ ಚಳವಳಿ ನಡೆಸುವುದಾಗಿದೆ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಕೇರ್ ಸೆಂಟರ್ಗಳನ್ನು ಹೆಚ್ಚಿಸಬೇಕು. ಕಡಿಮೆ ಲಕ್ಷಣ ಮತ್ತು ಹೆಚ್ಚಿನ ಲಕ್ಷಣ ಇರುವವರನ್ನು ಪ್ರತ್ಯೇಕ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬೇಕು, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ತಕ್ಷಣವೇ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ರೋಗಿಗಳ ಪರದಾಟ ತಪ್ಪಿಸಲು ಪ್ರತ್ಯೇಕ ಕಟ್ಟಡಗಳ ಗುರುತಿಸಬೇಕು. ಕೊರೋನಾವನ್ನು ತಕ್ಷಣವೇ ಹತೋಟಿಗೆ ತರಬೇಕೆಂದು ಆಗ್ರಹಿಸಿದ್ದಾರೆ.