Sunday, December 22, 2024

ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಂಡ್ರಾ ಪಿಎಸ್ಐ.? ಎಸ್ಪಿ ಕೊಟ್ಟ ಉತ್ತರ ಏನು ಗೊತ್ತಾ ?

ಹಾಸನ : ಹಿರಿಯ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ್ರಾ ಪಿಎಸ್ಐ ಎಂಬ ಅನುಮಾನಗಳು ಮೂಡಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಪಿಎಸ್ಐ ಕಿರಣ್ ಕುಮಾರ್ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳೋಕೆ ಏನಾದರೂ ಬಲವಾದ ಕಾರಣವಿರಬೇಕು ಅದನ್ನು ತನಿಖೆಯಿಂದ ಹೊರತರಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.‌

ಸರಣಿ ಕೊಲೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಪಿಎಸ್ಐ ಕಿರಣ್ ಕುಮಾರ್​​ಗೆ ತರಾಟೆ ತೆಗೆದುಕೊಂಡಿದ್ದರು, ಇಂದು ಚನ್ನರಾಯಪಟ್ಟಣಕ್ಕೆ ಹಿರಿಯ ಅಧಿಕಾರಿಗಳ ಭೇಟಿ ನೀಡುವ ಸಾಧ್ಯತೆ ಇತ್ತು, ಈ ವೇಳೆ ತಮ್ಮ ವಿರುದ್ದ ಶಿಸ್ತು ಕ್ರಮದ ಆತಂಕದಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಕಿರಣ್ ಕುಮಾರ್ ತಮ್ಮ ಮೇಲೆ ಶಿಸ್ತುಕ್ರಮದ ಬಗ್ಗೆ ಮಾಹಿತಿ ಬರುತ್ತಲೇ ವಿಚಲಿತರಾಗಿದ್ದರು ಎಂದು ಹೇಳಲಾಗುತ್ತಿದೆ. ಸತತ ಎರಡು ದಿನಗಳಿಂದ ನಿರಂತರವಾಗಿ ಕೆಲಸ ಮಾಡಿದ್ದ ಕಿರಣ್, ಕೊಲೆ ಕೇಸ್ ಬೇಧಿಸಿ ಮುಗಿಸುವಷ್ಟರಲ್ಲಿ ಮತ್ತೊಂದು ಕೊಲೆಯಾಗಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಎಸ್.ಐ.ವಿರುದ್ದ ಅಸಮಧಾನ ಆರೋಪವೂ ಕೂಡಾ ಇದೆ. ಅಧಿಕಾರಿಗಳ ವರ್ತನೆಯಿಂದ ಮನನೊಂದು ಆತ್ಮಹತ್ಯೆ ಗೆ ಶರಣಾಗಿರೋ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇವೆಲ್ಲವಕ್ಕೂ ತನಿಖೆಯ ಬಳಿಕವಷ್ಟೇ ಉತ್ತರ ಸಿಗಲಿದೆ.

ಪಿಎಸ್ ಐ ಆತ್ಮಹತ್ಯೆಗೆ ಹಾಸನ ಎಸ್ಪಿ ಕೊಟ್ಟ ಉತ್ತರ ಏನು ಗೊತ್ತಾ ?

 ಚನ್ನರಾಯಪಟ್ಟಣ ನಗರಠಾಣೆ ಪಿಎಸ್ಐ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಎಸ್ಪಿ ಆರ್. ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿ, ಇವರ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿಯಬೇಕಿದೆ, ನಿಖರ ಸಂಗತಿ ಗೊತ್ತಾಗಿಲ್ಲ, ಒಬ್ಬ ಒಳ್ಳೇ ಅಧಿಕಾರಿಯನ್ನು ಕಳೆದುಕೊಂಡ ನನಗೆ ನೋವಾಗಿದೆ, ದುಃಖದಲ್ಲಿದ್ದೇನೆ ಎಂದರು. ಆತ್ಮಹತ್ಯೆಯ ತನಿಖೆ ನಂತರ ಎಲ್ಲದರ ಮಾಹಿತಿ ನೀಡಲಾಗುವುದು. ಅಲ್ಲದೇ ಅವರ ಮೇಲೆ ಯಾವುದೇ ಶಿಸ್ತುಕ್ರಮದ ಪ್ರಸ್ತಾಪ ಇರಲಿಲ್ಲ, ಮೊನ್ನೆ ನಡೆದ‌ ಕೊಲೆ ಪ್ರಕರಣದ‌ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಈ‌ ವಿಚಾರವಾಗಿ ಕಿರಣ್ ಕುಮಾರ್ ಅವರ ಕಾರ್ಯವೈಖರಿ ಪ್ರಶಂಸಿಸಲಾಗಿತ್ತು, ಕಳೆದ ರಾತ್ರಿಯೂ ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಮತ್ತೊಂದು ಕೊಲೆಯಾಗಿತ್ತು, ಕುಡಿದ ವೇಳೆ ನಡೆದ ಕೊಲೆ ಸಂಬಂಧ ನಾವು ಯಾರ ಮೇಲೂ ಕ್ರಮ ಜರುಗಿಸುತ್ತಿರಲಿಲ್ಲ, ಆದರೂ ಏನಕ್ಕೆ ಹೀಗಾಗಿದೆ ಎಂದು ನಾವೂ ಶಾಖ್​ನಲ್ಲಿದ್ದೇವೆ ಎಂದು ಬಹಳ ದುಃಖದಿಂದ ಹೇಳಿದರು.

ಮೃತ ಕಿರಣ್ ಯಾವ ಮನಸ್ಥಿತಿಯಲ್ಲಿದ್ದ ಎಂಬುದನ್ನು ತಿಳಿಯಬೇಕಿದೆ, ಇಂದು ಐಜಿಪಿ‌ ಚನ್ನರಾಯಪಟ್ಟಣಕ್ಕೆ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಾನಾಡಿದ ಎಸ್ಪಿ, ಕೊಲೆ ನಡೆದಾಗ ಮೇಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡೋದು ಸಾಮಾನ್ಯ ಅದಕ್ಕೂ ಆತ್ಮಹತ್ಯೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಿರಣ್ ಕುಟುಂಬದವರು ನಮಗೆ ಏನೂ ಹೇಳಿಲ್ಲ, ನಾನು ಕಳೆದ ರಾತ್ರಿ 8.40 ರ ಸುಮಾರಿನಲ್ಲಿ ಕಿರಣ್ ಜೊತೆ ಮಾತನಾಡಿದ್ದೆ, ಆಗಲೂ ಆತ ನಗುತ್ತಲೇ ಸಂತೋಷದಿಂದ ಮಾತನಾಡಿದ್ದ, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ‌ ನೀಡಿದ್ದ ಆದರೆ ಬೆಳಗ್ಗೆ ಹೀಗಾಗಿರುವುದು ನನಗೂ ಹೇಗೆ ಎಂಬುದು ತಿಳಿಯುತ್ತಿಲ್ಲ. ಕಿರಣ್ ಸಾಯುವ ಮುನ್ನ ಡೆತ್​​ನೋಟ್ ಏನಾದ್ರೂ ಬರೆದಿದ್ರಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಬೇರೆ ಠಾಣೆಯಲ್ಲೂ ಕಿರಣ್ ಮೇಲೆ ಯಾವುದೇ ಕೇಸ್ ಅಥವಾ ತನಿಖೆ ನಡೆದಿರಲಿಲ್ಲ. ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಪ್ರಾಪರ್ಟಿ ರಿಕವರಿ ವಿಶೇಷ ತಂಡಕ್ಕೆ ಇವರನ್ನೇ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು, ಕಿರಣ್ ಕುಮಾರ್ ದಕ್ಷ ಅಧಿಕಾರಿಯಾಗಿದ್ದರು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES