ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನ ಸಭಾ ಕ್ಷೇತ್ರ ರಾಜ್ಯದಲ್ಲಿ ರಾಜಕೀಯ ವಿಷಯವಾಗಿ ಜಿದ್ದಾಜಿದ್ದಿನ ಕ್ಷೇತ್ರ. ಈ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಅನೇಕ ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಪೈಪೋಟಿ ನಡೆಯುತ್ತಿತ್ತು. ಆದ್ರೆ ಇತ್ತೀಚಿಗೆ ಎರಡು ವ್ಯಕ್ತಿಗಳ ನಡುವೆ ಬಹಳಷ್ಟು ಪೈಪೋಟಿ ನಡೆಯುತ್ತಿದೆ. ಮಾಜಿ ಸಚಿವ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ನಡುವೆ ರಾಜಕೀಯವಾಗಿ ಜಿದ್ದಾಜಿದ್ದಿನ ಪೈಪೋಟಿ ಇತ್ತು. ಮಾಜಿ ಸಚಿವ ಬಚ್ಚೇಗೌಡ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ನಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪುತ್ರ ಶರತ್ ಬಚ್ಚೇಗೌಡ ಕಣಕ್ಕಿಳಿದರು.
ಕಳೆದ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಬಿಜೆಪಿ ಸ್ಪರ್ಧಿ ಆಗಿ ಮತ್ತು ಕಾಂಗ್ರೆಸ್ ಪಕ್ಷದಿಂದ ಎಂಟಿಬಿ ನಾಗರಾಜ್ ಸ್ಪರ್ಧೆ ನಡೆಸಿದ್ದರು. ಈ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ನಂತರ ರಾಜ್ಯ ರಾಜಕರಣದಲ್ಲಿ ಎಂಟಿಬಿ ನಾಗರಾಜ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರ್ಪಡೆಯಾದರು. ನಂತರ ರಾಜ್ಯದಲ್ಲಿ ಬೈ ಎಲೆಕ್ಷನ್ ಘೋಷಣೆ ಆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಪರ ಎಂಟಿಬಿ ನಾಗರಾಜ್ ಸ್ಪರ್ಧೆ ನಡೆಸಿದರೆ ಸ್ವತಂತ್ರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಸ್ಪರ್ಧೆ ನಡೆಸಿದ್ರೆ ಇತ್ತ ಕಾಂಗ್ರೇಸ್ ಅಭ್ಯರ್ಥಿಯಾಗಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಸುರೇಶ್ ಕಣದಲ್ಲಿದ್ದರು. ಈ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಶರತ್ ಬಚ್ಚೇಗೌಡ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶ ಮಾಡಿದರು. ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಒಂದು ವರ್ಷದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಇತ್ತೀಚಿಗೆ ಹೊಸಕೋಟೆ ತಾಲೂಕು ತಾವರೆಕೆರೆ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹ ಸಾಕ್ಷಿಯಾಗಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಪಾಲ್ಗೊಂಡಿದ್ದರು. ಈ ವೇಳೆ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ಆದರೆ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತೇನೆ ಅಂತಾ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಇನ್ನೂ ಈ ಹೇಳಿಕೆಗೆ ಶರತ್ ಬಚ್ಚೇಗೌಡ ಸಹ ಪ್ರತಿಕ್ರಿಯೆ ನೀಡಿ ನಮ್ಮ ಎಲ್ಲ ಕಾರ್ಯಕರ್ತರ ಮತ್ತು ಹಿತೈಷಿಗಳ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಒಳ್ಳೆ ನಿರ್ಧಾರ ಕೈಗೊಳ್ಳುತ್ತೇನೆ ಅಂತಾ ಹೇಳಿದ್ದಾರೆ. ಇನ್ನೂ ಶರತ್ ಬಚ್ಚೇಗೌಡ ತಂದೆ ಸಂಸದ ಬಚ್ಚೇಗೌಡ ಬಿಜೆಪಿ ಪಕ್ಷದಲ್ಲಿ ಗೆಲುವು ಸಾಧಿಸಿದ್ದು ಈ ಸಂದರ್ಭದಲ್ಲಿ ಶರತ್ ಕಾಂಗ್ರೆಸ್ ಪಕ್ಷ ಹೋಗುತ್ತಾರೋ ಇಲ್ಲವೋ ಅನ್ನೋ ಕುತುಹೂಲ ಶುರುವಾಗಿದೆ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ.