ಧಾರವಾಡ : ಧಾರವಾಡದ ಹೇಮಾ ಮಾಲಿನಿ ಎಂದೆ ಹೆಸರಾಗಿದ್ದ ಇಂದೂಬಾಯಿ ವಾಜಪೇಯಿ ದೀರ್ಘ ಕಾಲಿನ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಇಂದೂಬಾಯಿ ಅಲಿಯಾಸ್ ಹೇಮಾ ಮಾಲಿನಿ ಕರ್ನಾಟಕ ವಿಶ್ವವಿಧ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ 4 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಪ್ರೋಫೆಸರ್ ಆಗಿ ಬದುಕು ಕಟ್ಟಿಕೊಳ್ಳಬೇಕಿದ್ದ ಇಂದೂಬಾಯಿ ಪ್ರೇಮಪಾಶದಲ್ಲಿ ಬಿದ್ದು ಕಡೆಗೆ ಪ್ರೀತಿ ವಿಫಲವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಧಾರವಾಡದ ನಿವಾಸಿಯಾಗಿದ್ದ ಇಂದೂಬಾಯಿ ಅಲಿಯಾಸ್ ಹೇಮಾ ಮಾಲಿನಿ ಜೊತೆ ಕಲಿತವರೆಲ್ಲ ಇದೀಗ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾದ ಮೇಲೆ ಧಾರವಾಡದ ಪ್ರತಿ ಬೀದಿ ಸುತ್ತುತ್ತಿದ್ದ ಇಂದೂಬಾಯಿಗೆ ಧಾರವಾಡದ ಜನ ಹೇಮಾ ಮಾಲಿನಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹೇಮಾ ಮಾಲಿನಿ ಹಾಗೇ ವಸ್ತ್ರ ಧರಿಸುತ್ತಿದ್ದ ಮತ್ತು ಹಿಂದಿ ಚಿತ್ರ ನಟಿ ಹೇಮಾ ಮಾಲಿನಿಯ ಬಹು ದೊಡ್ಡ ಅಭಿಮಾನಿಯಾಗಿದ್ದ ಇಂದೂಬಾಯಿ , ಹೇಮಾ ಮಾಲಿನಿ ನಟಿಸಿದ್ದ ಸಿನೆಮಾಗಳನ್ನು ತಪ್ಪದೇ ನೋಡುತ್ತಿದ್ದರು ಎನ್ನಲಾಗಿದೆ. ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಇಂದೂಬಾಯಿ ವಾಜಪೇಯಿ, ಪ್ರತಿನಿತ್ಯ ಪತ್ರಿಕೆಗಳನ್ನು ನೋಡುತ್ತಾ ಆಗುಹೋಗುಗಳನ್ನು ಗಮನಿಸುತ್ತಿದರು. ಹೇಮಾ ಮಾಲಿನಿ ಧಾರವಾಡದ ಇತಿಹಾಸದ ಪುಟಗಳಲ್ಲಿ ತನ್ನ ಪಾತ್ರದ ಪುಟವೊಂದನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಧೀರ್ಘ ಕಾಲಿನ ಅನಾರೋಗ್ಯದಿಂದ ಕಣ್ಮರೆಯಾದ ಹೇಮಾ ಮಾಲಿನಿ ಅಲಿಯಾಸ್ ಇಂದೂಬಾಯಿ ಹಾಡುತ್ತಿದ್ದ “ಖೋಯಾ ಖೋಯಾ ಚಾಂದ್ ” ಹಾಡು ಪ್ರತಿಯೊಬ್ಬರ ಬಾಯಲ್ಲಿ ರಿಂಗಣಿಸುತ್ತಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದರೂ ಸಹ ಯಾರಿಗೂ ತೊಂದರೆ ಕೊಡದ ಇಂದೂಬಾಯಿ ನಾಲ್ಕು ವರ್ಷಗಳಿಂದ ಕೊಪ್ಪಳದ ವೃದ್ದಾಶ್ರಮದಲ್ಲಿದ್ದರು. ಧಾರವಾಡಿಗರಿಗೆ ಅಚ್ಚುಮೆಚ್ಚಿನವರಾಗಿದ್ದ ಧಾರವಾಡದ ಹೇಮಾ ಮಾಲಿನಿ ಇನ್ನು ನೆನಪು ಮಾತ್ರ.