ಚಿಕ್ಕಮಗಳೂರು : ಕೊರೋನಾ ಇತಿಹಾಸದಲ್ಲಿ ಇದೇ ಮೊದಲು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು ಒಂದೇ ದಿನ 125 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಕಾಫಿನಾಡಿಗರು ಕಂಗಾಲಾಗಿದ್ದಾರೆ. ಜುಲೈ 16ನೇ ತಾರೀಖಿನಿಂದ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಜೋರಾಗಿತ್ತು. ಪ್ರತಿದಿನ 20-30-40 ಅಂತ ಒಂದೇ ದಿನ 80ರ ಗಡಿಯೂ ಮುಟ್ಟಿತ್ತು. ಆದರೆ, ಹೀಗೆ 100 ಯಾವತ್ತೂ ಬಂದಿರಲಿಲ್ಲ. ದಿನಂ ಪ್ರತಿ ಹೆಚ್ಚಾಗ್ತಿದ್ದ ಸೋಂಕಿತರ ಸಂಖ್ಯೆ ಕಂಡು ಕಾಫಿನಾಡಿಗರು ಅಯ್ಯೋ… ದೇವ್ರೇ ಅಂತ ತಲೆ ಮೇಲೆ ಕೈಹೊದ್ದು ಕೂತಿದ್ದರು. ಈ ಮಧ್ಯೆ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟ ಸಾವಿನ ಸಂಖ್ಯೆ ಕಂಡೂ ಜನ ಆತಂಕಕ್ಕೀಡಾಗಿದ್ದರು. ಇಂದೂ ಕೂಡ ಹೆಮ್ಮಾರಿ ಕೊರೋನಾಗೆ 85 ವರ್ಷದ ವೃದ್ಧೆ ಪ್ರಾಣ ತ್ಯಜಿಸಿದ್ದು, ಸೋಂಕಿತರ ಸಂಖ್ಯೆ ಇಂದು ಒಂದೇ ದಿನ 125 ಬಂದಿರೋದು ಜಿಲ್ಲೆಯ ಜನರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಇಂದು ಚಿಕ್ಕಮಗಳೂರಿನಲ್ಲಿ 86, ಕಡೂರಿನಲ್ಲಿ 17, ತರೀಕೆರೆಯಲ್ಲಿ 14, ಮೂಡಿಗೆರೆ-ಎನ್.ಆರ್.ಪುರದಲ್ಲಿ ತಲಾ ಮೂರು ಹಾಗೂ ಶೃಂಗೇರಿ ಕೊಪ್ಪದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ. ಈ ಮೂಲಕ ಕೊರೋನಾ ಇತಿಹಾಸದಲ್ಲಿ ಇದೇ ಮೊದಲು ಕ್ರೂರಿ ವೈರಸ್ ಜಿಲ್ಲೆಯ ದಶಧಿಕ್ಕುಗಳಲ್ಲೂ ಪತ್ತೆಯಾಗಿದ್ದು, ಜನ ಭಯಭೀತರಾಗಿದ್ದಾರೆ. ಇಂದಿನ 125 ಪ್ರಕರಣ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 916ಕ್ಕೆ ಏರಿಕೆಯಾಗಿದ್ದು, ಇಂದಿನ ಸೋಂಕಿತರ ಸಂಖ್ಯೆ ನೋಡಿದರೆ ಬಹುಶಃ ನಾಳೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 1000 ದಾಟಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಇಂದು ಕೂಡ ಕೊರೋನಾಗೆ ಸೆಡ್ಡು ಹೊಡೆದು 30 ಜನ ಬಿಡುಗಡೆ ಹೊಂದಿದ್ದು, ಈವರೆಗೆ 404 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 461 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕರೋನಾಗೆ ಇಂದು ಒಂದು ಸಾವು ಸಂಭವಿಸಿದ್ದು ಕೊರೋನಾಗೆ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದ್ದು, ಕೊರೋನ ಏರಿಕೆ ಸಂಖ್ಯೆ ಕಂಡ ಜಿಲ್ಲೆಯ ಜನರ ಎದೆಬಡಿತವೂ ದಿನಕಳೆದಂತೆ ಹೆಚ್ಚಾಗುತ್ತಿದೆ. ಕೊರೋನ ಆರಂಭದ ಮೊದಲ 55 ದಿನಗಳು ಜಿಲ್ಲೆಯಲ್ಲಿ ಒಂದೇ ಒಂದು ಕೊರೋನ ಕೇಸ್ ಇರಲಿಲ್ಲ. ಜಿಲ್ಲೆಯ ಜನ ನಾವು ಹುಟ್ಟುತ್ತಲೇ ಗ್ರೀನ್ ಜೋನ್‍ನಲ್ಲಿ ಇದ್ದೋರು ಇಲ್ಲಿಗೆ ಯಾವ ಕೊರೋನ ಬರೋದಿಲ್ಲ ಅಂತಿದ್ದರು. ಜಿಲ್ಲೆಯ ಇಂದಿನ ಸ್ಥಿತಿ ನೋಡಿದರೆ ಕೊರೋನ ಕಾಫಿನಾಡಲ್ಲೇ ಹಾಸಿಗೆ ಹಾಸಿಕೊಂಡು ಮಲಗಿರುವಂತಿದೆ. ಮೇ. 19ಕ್ಕೆ ಜಿಲ್ಲೆಯಲ್ಲಿ ಆರಂಭವಾದ ಮೊದಲ ಪ್ರಕರಣ 71 ದಿನಕ್ಕೆ ಸಾವಿರದ ಸನಿಹ ಬಂದು ನಿಂತಿದೆ. ಜನರ ಆತಂಕ ಇಮ್ಮಡಿಗೊಂಡಿದೆ…
ಸಚಿನ್ ಶೆಟ್ಟಿ ಚಿಕ್ಕಮಗಳೂರು…