ಮಂಡ್ಯ : ಕನ್ನಡಿಗರ ಜೀವನಾಡಿ ಕೆಆರ್‌ಎಸ್ ಜಲಾಶಯದ ಸುತ್ತಮುತ್ತ ಕಲ್ಲು ಗಣಿಗಾರಿಕೆಗೆ ನಿಷೇಧ ಹೇರುವಂತೆ ಒತ್ತಾಯಿಸಿ ಕರೆ ನೀಡಿದ್ದ ಮಂಡ್ಯ ನಗರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ ಕಂಡು ಬಂದಿದ್ದು, ಅಲ್ಲಲ್ಲಿ ಮಾತ್ರ ಅಂಗಡಿಗಳ ಸ್ವಯಂ ಬಾಗಿಲು ಹಾಕಿದ್ದವು. ಈ ನಡುವೆ ಅಧಿಕಾರಿಗಳು ಗಣಿ ಮಾಲೀಕರ ಜೊತೆ ಶಾಮೀಲಾಗಿ ಬಂದ್ ವಿಫಲಗೊಳಿಸುವ ಯತ್ನ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕನ್ನಂಬಾಡಿ ಕಟ್ಟೆ ನಾಡಿನ ಜೀವನಾಡಿ. ಇಂತಹ ಜೀವನಾಡಿಗೆ ಪಕ್ಕದ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಕಂಟಕವಾಗಿದೆ. ಕಲ್ಲು ಗಣಿಗಾರಿಕೆ ವೇಳೆ ಭಾರಿ ಸ್ಪೋಟಕಗಳನ್ನ ಬಳಸುವುದರಿಂದ ಜಲಾಶಯಕ್ಕೆ ಗಂಡಾಂತರ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿ ನೀಡಿ ವರ್ಷ ಕಳೆದರೂ ಗಣಿಗಾರಿಕೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಹೋರಾಟಗಳು ನಡೆದಾಗ ಮಾತ್ರ ನೆಪ ಮಾತ್ರಕ್ಕೆ ಕ್ರಷರ್‌ಗಳ ಮೇಲೆ ದಾಳಿ ನಡೆಸುವ ಅಧಿಕಾರಿಗಳು ನಂತರದ ದಿನಗಳಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯನ್ನ ತಡೆಯುವಲ್ಲಿ ವಿಫಲವಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಮಂಡ್ಯ ಜಿಲ್ಲೆಯ ವಿವಿಧ ಸಂಘಟನೆಗಳು ಇಂದು ಮಂಡ್ಯ ನಗರ ಬಂದ್ ಗೆ ಕರೆ ನೀಡಿದ್ದವು.
ಆದರೆ, ಬಂದ್‌ಗೆ ತಲೆ ಕೆಡಿಸಿಕೊಳ್ಳದ ವರ್ತಕರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಬೆಳಗ್ಗೆಯೇ ಜಮಾವಣೆಗೊಂಡ ಪ್ರತಿಭಟನಾಕಾರರು ಬೈಕ್ ಜಾಥಾ ಮೂಲಕ ನಗರದಾದ್ಯಂತ ಸಂಚರಿಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಮುಂದೆ ಪ್ರತಿಭಟನಾಕಾರರು ಮನವಿ ಮಾಡುತ್ತಾ ತೆರಳಿದ್ರೆ ಹಿಂದೆ ವರ್ತಕರು ಅಂಗಡಿಗಳ ಬಾಗಿಲು ತೆರೆಯುತ್ತಿದ್ದ ಸನ್ನಿವೇಶ ಕಂಡು ಬಂತು. ಇನ್ನು ಬೆಂಗಳೂರು-ಮೈಸೂರು ನಡುವೆ ಎಂದಿನಂತೆ ವಾಹನ ಸಂಚಾರ ಕಂಡು ಬಂತು. ಈ ನಡುವೆ ಡಿಸಿ ಕಛೇರಿಯತ್ತ ಮೆರವಣಿಗೆ ಮೂಲಕ ತೆರಳಲು ಯತ್ನಿಸಿದ ಪ್ರತಿಭಟನಾಕಾರರನ್ನ ಇಲ್ಲಿನ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲೇ ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ದ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. ಪೊಲೀಸ್ ಅಧಿಕಾರಿಗಳು ಗಣಿ ಮಾಲೀಕರ ಆಮಿಷಕ್ಕೆ ಬಲಿಯಾಗಿ ಬಂದ್ ವಿಫಲಗೊಳಿಸುವ ಯತ್ನ ನಡೆಸಿದ್ದಾರೆ ಅಂತ ಆರೋಪಿಸಿದ್ರು.
ಇನ್ನು ಯಾವುದೇ ಕಾರಣಕ್ಕೂ ಹೋರಾಟವನ್ನ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗಣಿ ಮಾಲೀಕರು ಹಣದ ಆಮಿಷವೊಡ್ಡಿ ಪ್ರತಿಭಟನೆ ತಡೆಯುವ ಹುನ್ನಾರ ನಡೆಸಿದ್ದಾರೆ. ಅವರ ಹುನ್ನಾರ ಫಲಿಸಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ರೆ ಹೋರಾಟವನ್ನ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ರು.
ಬಳಿಕ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿದ್ರು. ಈ ವೇಳೆ ಪೊಲೀಸರ ವಿರುದ್ದ ಘೋಷಣೆ ಕೂಗಿದ್ರು. ಬಂಧನದ ಬೆದರಿಕೆಗೆ ಬಗ್ಗುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.
…..
ಡಿ.ಶಶಿಕುಮಾರ್, ಮಂಡ್ಯ.
ಮಂಡ್ಯ ಬಂದ್ ಗೆ ನೀರಸ ಪ್ರತಿಕ್ರಿಯೆ | ಗಣಿ ಮಾಲೀಕರ ಜೊತೆ ಜಿಲ್ಲಾಡಳಿತದ ಶಾಮೀಲು ಆರೋಪ
TRENDING ARTICLES