Saturday, January 18, 2025

ಅಮಾನುಷವಾಗಿ ಗೂಡ್ಸ್ ಆಟೋದಲ್ಲಿ ಕೋತಿಗಳ ಸಾಗಣೆ; ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ರಕ್ಷಣೆ.

ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಕಳೆದ 4 ವರ್ಷದ ಹಿಂದೆ ಪಾಂಡವಪುರ ತಾಲೂಕಿನ ಕೆರೆತಣ್ಣೂರು ಬಳಿ 50ಕ್ಕೂ ಹೆಚ್ಚು ಕೋತಿಗಳಿಗೆ ವಿಷವಿಕ್ಕಿ ಕೊಂದಿದ್ದ ಪ್ರಕರಣ ನಡೆದಿತ್ತು. ಅಂತಹದ್ದೇ ಮತ್ತೊಂದು ಪ್ರಕರಣ ನಡೆಯುವುದನ್ನು ಪಾಂಡವಪುರ ತಾಲೂಕಿನ ಹಿಂದೂಪರ ಸಂಘಟನೆಯ ಕಾರ್ಯಕರ್ತರು ತಪ್ಪಿಸಿದ್ದಾರೆ. ಅಕ್ರಮವಾಗಿ ಕೋತಿಗಳನ್ನು ಹಿಡಿದು ಬೋನಿನಲ್ಲಿ ಅಮಾನುಷವಾಗಿ ಕೊಂಡೊಯ್ಯುತ್ತಿದ್ದ ವೇಳೆ ಆಟೋ ಹಿಡಿದು ನಿಲ್ಲಿಸಿ, 50ಕ್ಕೂ ಹೆಚ್ಚಿನ ಕೋತಿಗಳನ್ನು ರಕ್ಷಣೆ ಮಾಡಿದ್ದಾರೆ.
ಹೌದು! ಕಳೆದ ನಾಲ್ಕು ವರ್ಷದ ಹಿಂದೆ ಮಂಡ್ಯದ ಪಾಂಡವಪುರ ತಾಲೂಕಿನ ಕೆರೆ ತೊಣ್ಣೂರು ಬಳಿ 50 ಕ್ಕೂ ಹೆಚ್ಚು ಕೋತಿಗಳ‌ ಮಾರಣ ಹೋಮ‌ ನಡೆದಿತ್ತು. ಅದೇ ರೀತಿಯಲ್ಲಿ ನಡೆಯಲಿದ್ದ ಮತ್ತೊಂದು ಪ್ರಕರಣವನ್ನು ಪಾಂಡವಪುರ ತಾಲೂಕಿನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ. ಮೈಸೂರಿನಿಂದ ಅಕ್ರಮವಾಗಿ ಕೋತಿಗಳನ್ನು ಹಿಡಿದು ಆಟೋದಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ಪಾಂಡವಪುರದಲ್ಲಿ ಆಟೋ ಅಡ್ಡಗಟ್ಟಿ ತಡೆದು ಆಟೋದಲ್ಲಿ ಅಮಾನುಷವಾಗಿ ಬೋನ್ ನಲ್ಲಿ ಕೂಡಿಹಾಕಿ ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಕೋತಿಗಳನ್ನು ರಕ್ಷಣೆ ಮಾಡಿದ್ದಾರೆ. ಅಲ್ದೆ ಅಕ್ರಮವಾಗಿ ಕೋತಿ ಹಿಡಿದು ಸಾಗಿಸುತ್ತಿದ್ದವರ ವಿರುದ್ದ ಪ್ರಕರಣ ದಾಖಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಹಿಡಿದಿದ್ದ ಕೋತಿಗಳು!:
ಇನ್ನು ಮೈಸೂರಿನ ಉದಯಗಿರಿ ಬಡಾವಣೆಯ ಅಪಾರ್ಟ್ ಮೆಂಟ್ ಒಂದರಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿತ್ತಂತೆ. ಈ ಹಾವಳಿ ತಪ್ಪಿಸುವ ಉದ್ದೇಶದಿಂದ ಅಪಾರ್ಟ್ ಮೆಂಟ್ ಮಾಲೀಕರು ಮತ್ತು ನಿವಾಸಿಗಳು ಕೋತಿಗಳನ್ನು ಹಿಡಿಸಿದ್ದರು ಎನ್ನಲಾಗಿದೆ‌. ಹೀಗೆ ಹಿಡಿದ ಕೋತಿಗಳನ್ನು ಪಾಂಡವಪುರ ತಾಲೂಕಿನ‌ ಮೇಲುಕೋಟೆ ಅರಣ್ಯಕ್ಕೆ ಬಿಡಲು ಆಟೋದಲ್ಲಿ ತರಲಾಗುತ್ತಿತ್ತು ಎಂದು ಆಟೋ ಚಾಲಕ ತಿಳಿಸಿದ್ದಾನೆ. ಆದ್ರೆ ಇದಕ್ಕೆ ಸಂಬಂಧ ಪಟ್ಟ ಯಾವುದೇ ದಾಖಲೆ ಆಟೋ ಚಾಲಕನ ಬಳಿ ಇಲ್ಲ. ಈ ಕಾರಣಕ್ಕೆ ಆಟೋ ಸಮೇತ ಚಾಲಕನನ್ನು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇದು ಅಕ್ರಮವೆಂದು ಕಂಡು ಬಂದರೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸುವುದಾಗಿ ವಲಯ ಅರಣ್ಯಾಧಿಕಾರಿ ಶಿವಸಿದ್ದು ತಿಳಿಸಿದ್ದಾರೆ.
ಪಾಂಡವಪುರದಲ್ಲಿ ಕೋತಿ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಆಟೋ ಚಾಲಕನನ್ನು ಪೊಲೀಸರು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮೂಲಕ ಈ ಕೋತಿಗಳ ಅಕ್ರಮ ಸಾಗಾಣೆ ಪ್ರಕರಣವನ್ನು ಭೇಧಿಸಲು ಮುಂದಾಗಿದ್ದು, ಪೊಲೀಸರ ವಿಚಾರಣೆಯಿಂದಷ್ಟೆ ಇದರ ಸತ್ಯ ಬಯಲಿಗೆ ಬರಬೇಕಿದೆ.
….
ಡಿ.ಶಶಿಕುಮಾರ್, ಮಂಡ್ಯ.

RELATED ARTICLES

Related Articles

TRENDING ARTICLES