ಹಾಸನ : ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆದ ಬಿಜೆಪಿ ಕಾರ್ಯ ಕಾರಿಣಿ ಸಭೆ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ ದೊಡ್ಡ ರೀತಿಯ ನೆರೆ ಬಂತು. ಪ್ರಕೃತಿ ವಿಕೋಪದ ನಡುವೆಯೂ ಸಿಎಂ ಒಳ್ಳೆಯ ಕೆಲಸ ಮಾಡಿದ್ರು. ಕೋವಿಡ್ ನಿರ್ವಹಣೆಯಲ್ಲೂ ಸಿಎಂ ಮತ್ತು ಅವರ ಮಂತ್ರಿ ಮಂಡಳ ಒಳ್ಳೆ ಕೆಲಸ ಮಾಡಿದೆ ಎನ್ನುವ ಮೂಲಕ ಸರ್ಕಾರದ ಕಾರ್ಯ ನಿರ್ವಹಣೆಗೆ ಫುಲ್ ಮಾರ್ಕ್ ಕೊಟ್ಟರು. ರೈತರಿಗೆ ಯೋಜನೆ, ನೇಕಾರರ ಸಾಲ ಮನ್ನ, ಬಡವರಿಗೆ ಸಹಾಯ ಮಾಡಿದ್ದಾರೆ ಇದೇ ವೇಳೆ ಕೋವಿಡ್ ಉಪಕರಣ ಖರೀದಿಯಲ್ಲಿ ಎರಡು ಸಾವಿರ ಕೋಟಿ ಅವ್ಯವಹಾರ ಆರೋಪ ಸಂಬಂಧ ಕಾಂಗ್ರೆಸ್ ನಾಯಕರ ವಿರುದ್ದ ನಳೀನ್‌ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪುರಾತನ ಪರಂಪರೆಯ ಪಾರ್ಟಿ ಅದರ ರಾಜ್ಯಾಧ್ಯಕ್ಷರು, ಹಾಗೂ ಮಾಜಿ ಸಿಎಂ ಅಂಕಿ ಸಂಖ್ಯೆ ಇಟ್ಟುಕೊಂಡು ಮಾತಾಡಬೇಕು. ಜನರನ್ನು ದಾರಿತಪ್ಪಿಸೋ ಕೆಲಸ ಈಗ ಮಾಡಬಾರದು.
ಕಾಂಗ್ರೆಸ್ ಗೆ ಟೀಕೆ ಮಾಡಲು ವಿಚಾರಗಳೇ ಇಲ್ಲ ಎಂದು ಕಿಡಿ ಕಾರಿದರು. ಈ ಸಂದರ್ಭದಲ್ಲಿ ರಾಜಕೀಯ ಟೀಕೆ ಬಿಟ್ಟು ಜನರಲ್ಲಿ ಆತ್ಮ ವಿಶ್ವಾಸ ತುಂಬಬೇಕಿತ್ತು, ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಬೇಕಿತ್ತು. ಏನಾದ್ರು ಚರ್ಚೆಗಳಿದ್ರೆ ಬನ್ನಿ ವಿಧಾನ ಸಭೆಯಲ್ಲಿ ಚರ್ಚೆ ಮಾಡಿ ಎಂದು ಸವಾಲು ಹಾಕಿದರು.
ಎಲ್ಲಾ ಮಾಹಿತಿ ಕೊಟ್ಟಮೇಲೂ ಆರೋಪ ಮಾಡ್ತಾರೆ ಅಂದ್ರೆ ಇದು ಚಿಲ್ಲರೆ ರಾಜಕಾರಣ ಎಂದು ಟೀಕಿಸಿದರು. ಭ್ರಷ್ಟಾಚಾರ ಆಗಿದೆ ಎಂದು ಹೇಳುತ್ತಿರೋದು ಯಾವ ಪಕ್ಷ, ಭ್ರಷ್ಟಾಚಾರ ಆರೋಪದಲ್ಲಿ ಅವರ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಅಧ್ಯಕ್ಷರೂ ಬೇಲ್ ನಲ್ಲಿ ಇದ್ದಾರೆ. ರಾಜ್ಯದ ಅಧ್ಯಕ್ಷರೂ ಬೇಲ್ ನಲ್ಲಿ ಇದ್ದಾರೆ, ತನಿಖೆ ಬೇಡ ಎಂದು ಏಕೆ ಅರ್ಜಿ ಹಾಕಿದ್ದಾರೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಕಾಂಗ್ರೆಸ್ ಒಂದು ಬ್ರಹ್ಮಾಂಡ ಭ್ರಷ್ಟಾಚಾರದ ಪಾರ್ಟಿ. ಭ್ರಷ್ಟಾಚಾರಕ್ಕೆ ಮುನ್ನುಡಿ ಹಾಕಿದ್ದೇ ಕಾಂಗ್ರೆಸ್ ಎಂದು ಟೀಕಾ ಪ್ರಹಾರ ನಡೆಸಿದರು. ಇದೇ ವೇಳೆ ನಿಗಮ ಮಂಡಳಿ ಸ್ಥಾನ ಬೇಡ ಅಂತಾ ಯಾವ ಶಾಸಕರೂ ರಿಜೆಕ್ಟ್ ಮಾಡಿಲ್ಲ ಎಂದ ಕಟೀಲ್,
ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತ ಪ್ರಶ್ನೆಗೆ ನಮ್ಮ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಅವಕಾಶಗಳೇ ಇಲ್ಲ ಎಂದರು. ಇದು ಕೇವಲ ಮಾಧ್ಯಮಗಳ ಚರ್ಚೆ ಎಂದರು. ಸಿಎಂ ಬದಲಾವಣೆ ಬಗ್ಗೆ ಎಲ್ಲಿ ಹೇಳಿದ್ದಾರೆ, ಯಾರು ಹೇಳಿದ್ದಾರೆ ತೋರಿಸಿ. ಯಾರು ಸಿಎಂ ಆಗಬೇಕೆಂದು ಬರೆದುಕೊಟ್ಟಿದ್ದಾರೆ ಎಂದು ಕೇಳಿದರು. ಒಂದೋ ಶಾಸಕರು ಹೇಳಬೇಕು, ಯಾರಾದರು ಮಂತ್ರಿ ಹೇಳಿದ್ದಾರಾ?ರಾಜ್ಯಾಧ್ಯಕ್ಷನಾಗಿ ನಾನು ಹೇಳಿದ್ದೇನಾ? ಇದು ಕಪೋಲ ಕಲ್ಪಿತ ಒಂದು ವಿಚಾರ. ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲವೇ ಇಲ್ಲ. ಇನ್ನೂ ಮೂರು ವರ್ಷ ರಾಜ್ಯದ ಸಿಎಂ ಯಡಿಯೂರಪ್ಪ ನವರೇ ಈ ಅವಧಿಯನ್ನ ಬಿಜೆಪಿ ಪೂರೈಸುತ್ತೆ, ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಯಾವುದೇ ಪಾರ್ಟಿಗೂ ಸಿಎಂ ಬದಲಾವಣೆ ಮಾಡೋ ಶಕ್ತಿ ಯೂ ಇಲ್ಲ,
ಸಿದ್ದರಾಮಯ್ಯ, ಡಿಕೆಶಿ ಹೇಳಿದ್ರೆ ನಾವು ಸಿಎಂ ಚೇಂಜ್ ಮಾಡ್ತೀವಾ ಎಂದು ವ್ಯಂಗ್ಯವಾಡಿದರು. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲಾ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.