ದೊಡ್ಡಬಳ್ಳಾಪುರ : ಕೊರೊನಾ ವೈರಸ್ ನಿಂದ ಇಡೀ ದೇಶದಲ್ಲಿ ಎಲ್ಲ ಕ್ಷೇತ್ರಗಳು ನಷ್ಟ ಅನುಭವಿಸುವಂತಾಯಿತು. ನಂತರ ಸರ್ಕಾರ ಕೇಲ ಕ್ಷೇತ್ರಗಳಿಗೆ ಪರಿಹಾರ ಒದಗಿಸಿತ್ತು. ಇನ್ನೂ ಕೊರೋನಾ ವೈರಸ್ ನಿಂದ ರಾಜ್ಯದಲ್ಲಿ ಲಕ್ಷಾಂತರ ನೇಕಾರರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿತ್ತು, ಆದ್ರೆ ಇದೀಗ ರಾಜ್ಯ ಸರ್ಕಾರ ಹೊಸ ಐಡಿಯಾದೊಂದಿಗೆ ನೇಕಾರರ ಬಳಿ ಸೀರೆಗಳನ್ನು ಖರೀದಿ ಮಾಡಲು ಮುಂದಾಗಿರುವುದು ಲಕ್ಷಾಂತರ ನೇಕಾರರಿಗೆ ಸಂತಸ ತಂದಿದೆ.
ಕೊರೊನಾ ನಮ್ಮ ರಾಜ್ಯಕ್ಕೆ ಎಂಟ್ರಿ ಕೊಟ್ಟ ನಂತರ ನೇಕಾರ ಕುಟುಂಬಗಳ ಮೇಲೆ ಹೊಡೆತ ಬಿದ್ದಂತಾಗಿತ್ತು. ಇದರಿಂದ ನೇಕಾರಿಕೆ ಮಾಡುವ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ನಿಟ್ಟಿನಲ್ಲಿ ನೇಕಾರರ ಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದರು. ಇದೀಗ ನೇಕಾರರ ಹೋರಾಟಕ್ಕೆ ಮಣಿದ ಸರ್ಕಾರ ಪರಿಹಾರದ ನಿಟ್ಟಿನಲ್ಲಿ ಕೇಲ ಯೋಜನೆಗಳೊಂದಿಗೆ ಮುಂದಾಗಿದೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ ಒಂದರಲ್ಲೇ 25 ಸಾವಿರ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನೂ ರಾಜ್ಯದ ಒಟ್ಟು 8 ಜಿಲ್ಲೆಗಳ ಪೈಕಿ 38 ವಿಧಾನ ಸಭಾ ಕ್ಷೇತ್ರಗಳಲ್ಲಿ 2 ಲಕ್ಷ ಮಗ್ಗಗಳು ಕಾರ್ಯ ನಿರ್ವಹಿಸುತ್ತಿದ್ದು 5 ರಿಂದ 6 ಲಕ್ಷ ನೇಕಾಕರು ಉದ್ಯೋಗ ಮಾಡುತ್ತಿದ್ದರು. ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಶುಭ ಕಾರ್ಯಗಳು ಸ್ಥಗಿತಗೊಂಡಿವೆ ಜೊತೆಗೆ ಆಗಾಗ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಆಗುತ್ತಿದೆ. ಇದರಿಂದ ಸೀರೆಗಳನ್ನು ಹೊರ ರಾಜ್ಯಗಳಿಗೆ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದ್ದರಿಂದ ರಾಜ್ಯದಲ್ಲಿ ನೇಕಾರರಿಗೆ ಬಹಳಷ್ಟು ಸಮಸ್ಯೆ ಉಂಟಾಗಿತ್ತು. ಈ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ನೇಕಾರರಿಂದ ಸೀರೆ ಖರೀದಿ ಮಾಡಿ ಕೊರೊನಾ ವಾರಿಯರ್ಸ್ ಗೆ ಉಚಿತವಾಗಿ ವಿರತಣೆ ಮಾಡಲು ನಿರ್ಧರಿಸಿದೆ.
ನೇಕಾರರ ಅಂದಾಜು ರಾಜ್ಯದಲ್ಲಿ ಸುಮಾರು 50 ಲಕ್ಷ ಸೀರೆಗಳು ದಾಸ್ತಾನು ಇದ್ದು.. ಈಗಾಗಲೇ ಸೀರೆಗಳ ದಾಸ್ತಾನಿನ ಬಗ್ಗೆ ನೇಕಾರರ ಬಳಿ ಸರ್ಕಾರ ಮಾಹಿತಿ ಪಡೆದುಕೊಳ್ಳುವ ಕಾರ್ಯ ಮಾಡುತ್ತಿದೆ. ವಿವಿಧ ಸೀರೆಗಳ ಮಾಹಿತಿ ಮತ್ತು ಅವುಗಳ ಬೆಲೆ ಸಹಿತ ಒಂದೊಂದು ಘಟಕಗಳಲ್ಲಿ ಎಷ್ಟೆಷ್ಟು ಸೀರೆಗಳಿವೆ ಎಂಬುದರ ಮಾಹಿತಿಯನ್ನು ವೈಯಕ್ತಿಕವಾಗಿ ವಾಟ್ಸ್ ಆಪ್ ಮೂಲಕ ಸರ್ಕಾರ ಸಂಗ್ರಹ ಮಾಡುತ್ತಿದೆ. ಜವಳಿ ಇಲಾಖೆ ಈ ಬಗ್ಗೆ ಮಾಹಿತಿಯನ್ನು ಅದಷ್ಟು ಬೇಗ ಸರ್ಕಾರಕ್ಕೆ ಒದಗಿಸಿದರೆ ನೇಕಾರರ ಬಳಿಯಿಂದ ಸೀರೆಗಳನ್ನು ಸರ್ಕಾರ ಖರೀದಿ ಮಾಡುತ್ತದೆ.
ಒಟ್ಟಾರೆ ನೇಕಾರರ ಬಳಿಯಿಂದ ಸರ್ಕಾರ ಸೀರಿಗಳನ್ನು ಖರೀದಿ ಮಾಡಿದರೆ, ಇಷ್ಟು ದಿನ ಕೆಲಸ ಸ್ಥಗಿತಗೊಂಡಿದ್ದ ನೇಕಾರಿಕೆ ಮತ್ತೆ ಪ್ರಾರಂಭವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ದೊರಕುವಂತೆ ಆಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಆದಷ್ಟು ಬೇಗ ಸೀರೆಗಳನ್ನು ಖರೀದಿ ಮಾಡಲಿ ಎಂಬುದು ನೇಕಾರರ ಆಶಯ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ.