ದಕ್ಷಿಣ ಕನ್ನಡ : ಆನ್ ಲೈನ್ ಶಿಕ್ಷಣಕ್ಕೆ ಪೂರಕ ನೆಟ್ ವರ್ಕ್ ಸಿಗದ ಹಿನ್ನೆಲೆ ವಿದ್ಯಾರ್ಥಿಗಳು ಗುಡ್ಡದ ಮೇಲೊಂದು ಟೆಂಟ್ ನಿರ್ಮಿಸಿ ಅಲ್ಲಿಂದಲೇ ತರಗತಿ ಆಲಿಸುತ್ತಿರುವ ದೃಶ್ಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿ ಅರಣ್ಯದೊಳಗೆ ಕಂಡು ಬರುತ್ತಿದೆ. ಇಲ್ಲಿನ ಶಿಬಾಜೆ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳಿದ್ದು ಅದರಲ್ಲಿ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್ ಲೈನ್ ತರಗತಿ ಆರಂಭವಾಗಿದೆ. ಆದರೆ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲದೇ ಮಕ್ಕಳು ಆನ್ ಲೈನ್ ತರಗತಿಗೆ ಹಾಜರಾಗಲು ಪರದಾಡುವಂತಾಗಿತ್ತು. ಇದರಿಂದ ನೆಟ್ ವರ್ಕ್ ಗಾಗಿ ಹುಡುಕಾಡಲು ಶುರು ಮಾಡಿದ ವಿದ್ಯಾರ್ಥಿಗಳು ತಲುಪಿದ್ದು ಪೆರ್ಲ ಬೈಕರ ಗುಡ್ಡೆಗೆ. ಅರಣ್ಯದೊಳಗೆ ಸಂಚರಿಸಬೇಕಾದ ಈ ಗುಡ್ಡ ಎತ್ತರದ ಪ್ರದೇಶವಾದ್ದರಿಂದ ಮೊಬೈಲ್ ಸಿಗ್ನಲ್ ಸಿಗುತ್ತಿದ್ದು, ಇದನ್ನ ಮನಗಂಡ ವಿದ್ಯಾರ್ಥಿಗಳು ಮನೆಯಿಂದ ಸೀರೆಯನ್ನ ತೆಗೆದುಕೊಂಡು ಹೋಗಿ ಮರಗಳ ಸಹಾಯದಿಂದ ಟೆಂಟ್ ನಿರ್ಮಿಸಿದ್ದಾರೆ. ಮಾತ್ರವಲ್ಲದೇ ಪ್ರತಿದಿನ ಸುಮಾರು 15 ವಿದ್ಯಾರ್ಥಿಗಳು ಗುಡ್ಡವನ್ನೇರಿ ಈ ಟೆಂಟ್ ನಲ್ಲಿ ಒಂದುಗೂಡುತ್ತಾರೆ. ಬೇರೆ ಬೇರೆ ತರಗತಿಗಳಲ್ಲಿ ಕಲಿಯುತ್ತಿರುವ ಇವರು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಅಲ್ಲಿ ಇದ್ದು, ಆನ್ ಲೈನ್ ಮೂಲಕ ಪಾಠ ಆಲಿಸುತ್ತಾರೆ. ಆದರೆ ಕಾಡು ಮೃಗಗಳ ದಾಳಿ ಭೀತಿ, ಸೊಳ್ಳೆ ಕಾಟ ಈ ಮಕ್ಕಳಿಗೆ ಕಾಡುತ್ತಿದ್ದರೂ, ಆ ಎಲ್ಲಾ ಸವಾಲನ್ನ ಮೆಟ್ಟಿ ನಿಂತು ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ. ಕಳೆದ 12 ವರುಷಗಳಿಂದ ಮೊಬೈಲ್ ಟವರ್ ನಿರ್ಮಾಣಕ್ಕಾಗಿ ಸಂಸದ, ಶಾಸಕರಿಗೆ ಹೋದ ಪತ್ರಗಳಿಗೆ ಲೆಕ್ಕವಿಲ್ಲ. ಆದರೆ ಇದುವರೆಗೂ ಪರಿಹಾರ ಮಾತ್ರ ಮರೀಚಿಕೆಯೇ ಆಗಿ ಉಳಿದಿದೆ. ಹಾಗಾಗಿ ಇದೀಗ ಮತ್ತೆ ಟವರ್ ನಿರ್ಮಾಣದ ಬೇಡಿಕೆ ಮುನ್ನೆಲೆಗೆ ಬಂದಿದೆ. ಒಂದು ಕಡೆ ಕೋವಿಡ್ ಸಂದಿಗ್ಧತೆ, ಇನ್ನೊಂದೆಡೆ ಕಾಡು ಮೃಗಗಳ ದಾಳಿ ಭೀತಿ ನಡುವೆಯೂ ಪೋಷಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆತಂಕದಿಂದಲೇ ಈ ಗುಡ್ಡಕ್ಕೆ ಕಳುಹಿಸುತ್ತಿದ್ದಾರೆ.
ಇರ್ಷಾದ್ ಕಿನ್ನಿಗೋಳಿ, ಪವರ್ ಟಿವಿ, ಮಂಗಳೂರು