ಶಿವಮೊಗ್ಗ: ಅಪರೂಪದಲ್ಲಿಯೂ ಅಪರೂಪವಾಗಿ ಅರಳಿದೆ ಈ ಚಿನ್ನದಲ್ಲಿ ಅರಳಿದ ಕಲಾ ಕೌಶಲ್ಯ. ಅಕ್ಕಸಾಲಿಗನೊಬ್ಬನ ಕೈಯಲ್ಲಿ ಚಿತ್ತಾರಗೊಂಡಿದೆ, ರಾಷ್ಟ್ರೀಯ ಮಿಲಿಟರಿ ಸ್ಮಾರಕ. ಕಾರ್ಗಿಲ್ ವಿಜಯ ದಿವಸ್ ಆಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಅರಳಿದೆ ಬಂಗಾರದ ಮೈಕ್ರೋ ಸ್ಮಾರಕ. ಹೌದು, ಇಂದು ದೇಶದೆಲ್ಲೆಡೆ 21 ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ಸಮರ್ಪಣಾ ಕಾರ್ಯಕ್ರಮಗಳು ನಡೆಯುತ್ತಿವೆ. ಪಾಪಿ ಪಾಕಿಸ್ತಾನದ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥವಾಗಿ ಇಂದು ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಸೈನಿಕರು ದೇಶಕ್ಕಾಗಿ ತಮ್ಮ ಬಲಿದಾನವನ್ನೇ ಮಾಡಿದ್ದರು. ಇಂತಹ ವೀರ ಯೋಧರಿಗೆ ಸಲಾಂ ಹೇಳುವ ಇಂದು ದೇಶದೆಲ್ಲೆಡೆ ಮಹತ್ಕಾರ್ಯ ನಡೆಯುತ್ತಿದ್ದು, ಇಲ್ಲಿ ಶಿವಮೊಗ್ಗದ ಯುವಕನೊಬ್ಬ ಮೈಕ್ರೋ ಕಲಾಕೃತಿ ರಚಿಸಿ, ಭಾರತದ ವೀರಯೋಧರಿಗೆ ಡಿಫ್ರೆಂಟಾಗಿ ಸಲಾಂ ಹೇಳಿದ್ದಾನೆ.
ಸಣ್ಣದರಲ್ಲಿಯೇ ಅತಿ ಸಣ್ಣ ರಾಷ್ಟ್ರೀಯ ಮಿಲಿಟರಿ ಸ್ಮಾರಕವನ್ನು, ಬಂಗಾರದಲ್ಲಿ ರಚಿಸಿ, ಭಾರತೀಯ ವೀರ ಯೋಧರಿಗೆ ಸೆಲ್ಯೂಟ್ ಮಾಡಿದ್ದಾನೆ. ಕೇವಲ 0.8 ಇಂಚು ಎತ್ತರ, 0.240 ಮಿಲಿ ಗ್ರಾಮ್ ತೂಕದ ಬಂಗಾರದ ಈ ಕಲಾಕೃತಿ ನೋಡುಗರ ಕಣ್ಮನ ಸೆಳೆಯುತ್ತಿದ್ದು, ಇದನ್ನು ಬೂತಗನ್ನಡಿಯಲ್ಲಿಯೇ ವೀಕ್ಷಿಸಬೇಕಾಗಿದ್ದು, ಕಾರ್ಗಿಲ್ ವಿಜಯೋತ್ಸವವನ್ನು ಶಿವಮೊಗ್ಗದ ಭದ್ರಾವತಿಯ ಸಚಿನ್ ಈ ರೀತಿ ಸೆಲೆಬ್ರೇಷನ್ ಮಾಡುತ್ತಿದ್ದಾನೆ. ಸಂಪೂರ್ಣವಾಗಿ ಬಂಗಾರದಲ್ಲಿಯೇ ಈ ಅದ್ಭುತ ಕಲಾಕೃತಿ ರಚಿಸಿರುವ ಸಚಿನ್, ಮೂಲತಃ ಅಕ್ಕಸಾಲಿಗನಾಗಿದ್ದರೂ, ಈ ರೀತಿ ಮೈಕ್ರೋ ಆರ್ಟ್ ನಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದಾನೆ.
ಈ ದಿನದ ನೆನಪಿಗಾಗಿ ಬಂಗಾರದಲ್ಲಿ ಕುಸುರಿ ಕೆಲಸ ಮಾಡಿ ಕಾರ್ಗಿಲ್ ವಿಜಯ ದಿವಸ್ ನ ಕಲಾಕೃತಿ ರಚಿಸಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನ ನೀವು ನೋಡಿದ್ರೆ, ಆಶ್ಚರ್ಯವಾಗೋದಂತೂ ಸತ್ಯ. ಅಷ್ಟಕ್ಕೂ, ಸಚಿನ್ ರಚಿಸಿರುವ ಅತಿ ಚಿಕ್ಕ ಬಂಗಾರದ ಶಿವಲಿಂಗ ಈಗಾಗಲೇ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲು ಮಾಡಿದ್ದು, ಈ ರೀತಿಯ ಅನೇಕ ಕುಸುರಿ ಕೆಲಸಗಳನ್ನು ಕಲಾಕಾರ ಸಚಿನ್ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ, ತನ್ನೊಳಗಿನ ಕಲಾ ಕೌಶಲ್ಯವನ್ನು, ಬಂಗಾರದಲ್ಲಿ ಅರಳಿಸಿರುವ ಅದರಲ್ಲೂ ರಾಷ್ಟ್ರೀಯ ಮಿಲಿಟರಿ ಸ್ಮಾರಕವಾಗಿರುವ ಅಮರ್ ಜವಾನ್ ಕಲಾಕೃತಿ ನೋಡುಗರ ಗಮನ ಸೆಳೆಯುತ್ತಿದೆ. ವೃತ್ತಿಯಲ್ಲಿ ಚಿನ್ನ-ಬೆಳ್ಳಿ ಆಭರಣ ತಯಾರಿ. ಪ್ರವೃತ್ತಿಯಲ್ಲಿ ಬಿಡುವಿದ್ದಾಗ ಇದೇ ಬಂಗಾರದಲ್ಲಿ, ತನ್ನೊಳಗಿನ ಕಲೆಯನ್ನ ಜಾಗೃತಿಗೊಳಿಸಿ ರೂಪ ಕೊಡುತ್ತಿರುವ ಸಚಿನ್ ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.