ಮಂಡ್ಯ: ವಿರೋಧದ ನಡುವೆಯೂ ಕೆ.ಆರ್.ಎಸ್. ಅಣೆಕಟ್ಟೆಯ ಮುಖ್ಯ ದ್ವಾರದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಭರದಿಂದ ಸಾಗಿದೆ.
ರಾಜ್ಯ ಸರ್ಕಾರ ಕೆ.ಆರ್.ಎಸ್. ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನ ನಿರ್ಮಾಣ ಮಾಡೋಕೆ ನಿರ್ಧರಿಸಿದೆ.
ಅದರಂತೆ ಈಗಾಗಲೇ ಮೈಸೂರು ಮೂಲದ HSR ಕಂಪನಿಗೆ 9 ಕೋಟಿ ರೂಪಾಯಿಗೆ ಟೆಂಡರ್ ಕೂಡ ನೀಡಿದೆ. ಟೆಂಡರ್ ಪಡೆದಿರುವ ಕಂಪನಿ ಎರಡೂ ಪ್ರತಿಮೆಗಳ ನಿರ್ಮಾಣ ಕಾಮಗಾರಿ ಶುರು ಮಾಡಿದೆ. ಈ ನಡುವೆಯೇ ಮಂಡ್ಯ, ಮೈಸೂರು ಜಿಲ್ಲೆಗಳ ಪ್ರಗತಿಪರ ಸಂಘಟನೆಗಳ ಮುಖಂಡರು ನಾಲ್ವಡಿಯವರ ಸರಿ ಸಮಾನವಾಗಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡೋದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಸಂಬಂಧ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಹಲವಾರು ಪ್ರತಿಭಟನೆಗಳು ಕೂಡ ನಡೆದಿದ್ದವು.
ಶೀಘ್ರ ಕಾಮಗಾರಿ ಪೂರ್ಣಗೊಳಿಸಲುಸೂಚನೆ:
ಪ್ರತಿಭಟನೆ ಮತ್ತು ವಿರೋಧ ತೀವ್ರವಾಗ್ತಿದ್ದಂತೆ ಸರ್ಕಾರ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನ ಚುರುಕುಗೊಳಿಸಿದೆ.
ಈಗಾಗಲೇ ಅಧಿಕಾರಿಗಳು ಗುತ್ತಿಗೆದಾರರಿಗೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬಾಗೀನ ಸಮರ್ಪಣೆ ದಿನವೇ ಜೋಡಿ ಪ್ರತಿಮೆಗಳ ಲೋಕಾರ್ಪಣೆ?:
ಸರ್ಕಾರದ ಸೂಚನೆಯಂತೆ ಗುತ್ತಿಗೆದಾರರು ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದೇ ಆದರೆ, ಕನ್ನಂಬಾಡಿಗೆ ಬಾಗೀನ ಸಮರ್ಪಣೆ ಕಾರ್ಯಕ್ರಮದಂದೇ ಎರಡೂ ಪ್ರತಿಮೆಗಳ ಲೋಕಾರ್ಪಣೆ ಕೂಡ ಆಗಲಿದೆ.
ನಾಲ್ವಡಿಯವರಿಗಿಂತ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣವೇ ಚುರುಕು:
ಹೀಗಾಗಿ ನಾಲ್ವಡಿಯವರ ಪ್ರತಿಮೆಗಿಂತ ಮೊದಲೇ ವಿಶ್ವೇಶ್ವರಯ್ಯ ಅವರ ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಅಣೆಕಟ್ಟೆಯ ಭದ್ರತೆಗೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನ ನಿಯೋಜಿಸಲಾಗಿದೆ. ಅವರ ಭದ್ರತೆಯಲ್ಲಿ ಕಾಮಗಾರಿಗೆ ಅಡ್ಡಿಯಾಗದಂತೆ ನಿಗಾವಹಿಸಲಾಗಿದೆ. ವಿರೋಧ ತೀವ್ರಗೊಳ್ಳುವ ಮುನ್ನವೇ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸಲು ಪ್ಲಾನ್ ಮಾಡಲಾಗಿದೆ. ಹೀಗಾಗಿಯೇ ನಾಲ್ವಡಿಯವರ ಪ್ರತಿಮೆಗಿಂತ ಮುಂಚೆಯೇ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
ವಿಶ್ವೇಶ್ವರಯ್ಯ ಪ್ರತಿಮೆಗೆ ವಿರೋಧ ಯಾಕೆ?
KRS ಅಣೆಕಟ್ಟು ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಒಬ್ಬರೇ ಶ್ರಮಿಸಿಲ್ಲ. ವಿಶ್ವೇಶ್ವರಯ್ಯರಂತೆ ಏಳು ಮಂದಿ ದಿವಾನರು ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. ನಿಲ್ಲಿಸುವುದಾದರೇ ಏಳು ಜನ ದಿವಾನರ ಪ್ರತಿಮೆ ನಿಲ್ಲಿಸಿ ಅನ್ನೋದು ಪ್ರಗತಿಪರ ಸಂಘಟನೆಗಳ ಮುಖಂಡರ ಆಗ್ರಹ.
ಮೈಸೂರು ಸಂಸ್ಥಾನದಲ್ಲಿ ವಿಶ್ವೇಶ್ವರಯ್ಯ ನೌಕರ ಅಷ್ಟೇ.
ಅಣೆಕಟ್ಟೆಯ ನಿರ್ಮಾಣಕ್ಕೆ ಮೈಸೂರು ಸಂಸ್ಥಾನದ ಮಹಾರಾಜರು ತಮ್ಮ ಮನೆ ಚಿನ್ನಾಭರಣಗಳನ್ನ ಮಾರಿದ್ದಾರೆ. ಅಣೆಕಟ್ಟು ನಿರ್ಮಾಣಕ್ಕೆ ಮಹಾರಾಜರ ಕೊಡುಗೆ ಅಪಾರ. ಅವರ ಪ್ರತಿಮೆ ನಿರ್ಮಾಣ ಮಾಡೋದು ಸರಿ. ಆದರೆ, ಒಬ್ಬ ಮಹಾರಾಜನ ಸರಿ ಸಮಾನಕ್ಕೆ ನೌಕರನ ಪ್ರತಿಮೆ ನಿರ್ಮಾಣ ಸರಿಯಲ್ಲ. ಅಷ್ಟಕ್ಕೂ ವಿಶ್ವೇಶ್ವರಯ್ಯ ಅಂದಿನ ಮೈಸೂರು ಸಂಸ್ಥಾನದ ನೌಕರ ಅಷ್ಟೇ ಅನ್ನೋದು ಪ್ರಗತಿಪರರ ವಾದ.
ಪ್ರತಿಮೆ ನಿರ್ಮಾಣವೇ ಅವೈಜ್ಞಾನಿಕ.
ಇನ್ನು ವಿಶ್ವೇಶ್ವರಯ್ಯ ಪ್ರತಿಮೆಯಿಂದ ಅಣೆಕಟ್ಟು ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಅನ್ನೋ ಆರೋಪ ಕೂಡ ಕೇಳಿ ಬರ್ತಿದೆ.
ಅಣೆಕಟ್ಟೆಗೆ ಡ್ಯಾಂನ ಸ್ವಾಗತ ಕಮಾನು ಕಳಸವಿದ್ದಂತೆ. ಅದನ್ನೇ ಮರೆ ಮಾಚುವಂತೆ ಪ್ರತಿಮೆ ನಿರ್ಮಾಣ ಸರಿಯಲ್ಲ. ದೂರದಿಂದಲೇ ಪ್ರವಾಸಿಗರು ಅಣೆಕಟ್ಟೆಯ ಸೌಂದರ್ಯ ಸವಿಯುತ್ತಿದ್ದರು. ಅವೈಜ್ಞಾನಿಕವಾಗಿ ಪ್ರತಿಮೆ ನಿರ್ಮಾಣ ಮಾಡ್ತಿರೋದ್ರಿಂದ ಡ್ಯಾಂನ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಅಂತಾರೆ ಸ್ಥಳೀಯರು.
ವಿಶ್ವನಾಥ್ ಹೆಗಲಿಗೆ ಜವಾಬ್ದಾರಿ:
ಇನ್ನು ವಿಶ್ವೇಶ್ವರಯ್ಯ ಪ್ರತಿಮೆ ವಿವಾದ ಇತ್ಯರ್ಥದ ಜವಾಬ್ದಾರಿಯನ್ನ ಹೆಚ್.ವಿಶ್ವನಾಥ್ ಅವರಿಗೆ ನೀಡಲಾಗಿದೆ. ಇತ್ತೀಚೆಗೆ ಪ್ರಗತಿಪರ ಸಂಘಟನೆಗಳ ಮುಖಂಡರ ನಿಯೋಗ ವಿಶ್ವನಾಥ್ ಅವರನ್ನ ಭೇಟಿ ಮಾಡಿತ್ತು. ಈ ವೇಳೆ ವಿಶ್ವನಾಥ್ ಅವರು ಮುಖ್ಯಮಂತ್ರಿ ಜೊತೆ ಮಾತನಾಡಿ ವಿಶ್ವೇಶ್ವರಯ್ಯ ಪ್ರತಿಮೆಯನ್ನ ಬೇರೆಡೆ ಮಾಡುವ ಭರವಸೆ ನೀಡಿದ್ದಾರೆ. ಅವರು ಭರವಸೆ ನೀಡಿರುವಂತೆ ನಡೆದುಕೊಳ್ಳುವ ವಿಶ್ವಾಸವಿದೆ. ಅವರ ನಡೆಯನ್ನ ಕಾಯುತ್ತಿದ್ದೇವೆ ಅಂತಾರೆ ಮಂಡ್ಯದ ಪ್ರೊ.ಜಯಪ್ರಕಾಶ್ ಗೌಡ.
ಏನೇ ಆಗ್ಲೀ, ವಿಶ್ವೇಶ್ವರಯ್ಯ ಅವರ ಹೆಸರಲ್ಲಿ ಕೆ.ಆರ್.ಎಸ್. ಮತ್ತೊಮ್ಮೆ ವಿವಾದದ ಕೇಂದ್ರವಾಗಿರೋದಂತೂ ಸುಳ್ಳಲ್ಲ. ಈ ವಿವಾದವನ್ನ ಸರ್ಕಾರ ಯಾವ ರೀತಿ ಬಗೆಹರಿಸಲಿದೆ ಅನ್ನೋದನ್ನ ಕಾದುನೋಡ್ಬೇಕಿದೆ.
….
ಡಿ.ಶಶಿಕುಮಾರ್, ಮಂಡ್ಯ.