Thursday, January 9, 2025

ಜೆಡಿಎಸ್ ನಲ್ಲಿ ಅಲ್ಲೋಲ ಕಲ್ಲೋಲ!; ಪಕ್ಷದಲ್ಲಿ ಕಿಡಿ ಹೊತ್ತಿಸಿದ ನಿಖಿಲ್ ಕುಮಾರಸ್ವಾಮಿಯ ಆ ಒಂದು ಪೋಸ್ಟ್.

ಮಂಡ್ಯ: ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ, ಜಾತ್ಯಾತೀತ ಜನತಾ ದಳ(ಜೆಡಿಎಸ್) ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಯುವ ಘಟಕದ ರಾಜ್ಯಾಧ್ಯಕ್ಷರ ಆ ಒಂದು ಪೋಸ್ಟ್ ಇಡೀ ಪಕ್ಷದಲ್ಲಿ ಕಿಡಿ ಹೊತ್ತಿಸಿದೆ. ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ಹೊರ ಹಾಕ್ತಿರುವ ಕಾರ್ಯಕರ್ತರು ನಿಖಿಲ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಹೌದು. ನಿನ್ನೆಯಷ್ಟೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ನಿರ್ಮಾಪಕ ಕಂ ರಾಜಕಾರಣಿ ಮುನಿರತ್ನ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರುವ ಪೋಸ್ಟ್ ಹಾಕಿದ್ದರು.
ನಿಖಿಲ್ ಅವರ ಆ ಒಂದು ಪೋಸ್ಟ್ ಇದೀಗ ಜೆಡಿಎಸ್ ಪಕ್ಷದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದ್ದು, ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ನಿಖಿಲ್ ಅವರ ಆ ಒಂದು ಶುಭಾಶಯದ ಪೋಸ್ಟ್ ಗೆ ಆಕ್ರೋಶದ ಜೊತೆಗೆ ಪರ-ವಿರೋಧ ಚರ್ಚೆಗೂ ಕಾರಣವಾಗಿತ್ತು.
ಇದರಿಂದ ಮುಜುಗರಕ್ಕೀಡಾದ ನಿಖಿಲ್ ತಮ್ಮ ಪೋಸ್ಟ್ ಸಮರ್ಥಿಸಿಕೊಳ್ಳುವ ಮತ್ತು ಅದಕ್ಕೆ ಸಮಜಾಯಿಷಿ ನೀಡುವ ನಿಟ್ಟಿನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಅದಕ್ಕೂ ಸಮಾಧಾನಗೊಳ್ಳದ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಿಖಿಲ್ ವಿರುದ್ಧ ತಿರುಗಿಬಿದ್ದಿದ್ದಾರೆ. ಆಕ್ರೋಶಭರಿತವಾಗಿಯೇ ತಮ್ಮ ಅಸಮಾಧಾನವನ್ನ ಹೊರ ಹಾಕ್ತಿದ್ದಾರೆ.

ಕುಮಾರಣ್ಣನ ಕತ್ತು ಹಿಸುಕಿದವರಲ್ಲಿ ಮುನಿರತ್ನ ಕೂಡ ಪ್ರಮುಖರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಪತನ ಮಾಡಿ, ನಮ್ಮ ಕುಮಾರಣ್ಣನ ಕತ್ತು ಹಿಸುಕಿದವರಲ್ಲಿ ಮುನಿರತ್ನ ಕೂಡ ಒಬ್ಬರು. ನಾವು ಇಂದು, ಮುಂದು, ಎಂದೆಂದಿಗೂ ಕುಮಾರಣ್ಣನಿಗೆ ಮೋಸ ಮಾಡಿದ ಪ್ರತಿಯೊಬ್ಬರನ್ನೂ ಬದ್ಧ ವೈರಿಗಳಂತೆ ಕಾಣುತ್ತೇವೆಯೇ ವಿನಃ ಮಿತ್ರರಂತೆ ಎಂದಿಗೂ ಕಾಣುವುದಿಲ್ಲ.
ಪಕ್ಷ, ಮಿತ್ರ ದ್ರೋಹಿಗಳನ್ನ ಸಮರ್ಥಿಸಿಕೊಳ್ಳುವುದಾದರೆ, ದಯವಿಟ್ಟು ರಾಜೀನಾಮೆ ಕೊಡಿ,
ಯುವ ರಾಜ್ಯಾಧ್ಯಕ್ಷ ಸ್ಥಾನವನ್ನ ಶರಣಗೌಡರಿಗೆ ಕೊಡಿ, ರಾಜ್ಯಾದ್ಯಂತ ಓಡಾಟ ಮಾಡಿ ಪಕ್ಷ ಸಂಘಟನೆ ಮಾಡಿ, ಎರಡು ದೋಣಿ ಪ್ರಯಾಣ ಮುಳುಗಿಸುತ್ತೆ ಬ್ರದರ್, ಕಾರ್ಯಕರ್ತರು ಬೇರೆ ಪಕ್ಷದ ಬಗ್ಗೆಯೂ ಪ್ರೀತಿ ತೋರಿದರೆ ನಿಮ್ಮ ಪ್ರಗತಿ ಹೇಗೆ?, ನೀವು ಅಧ್ಯಕ್ಷರಾದ ಮೇಲೆ ಎಷ್ಟು ಕಡೆ ಪ್ರಯಾಣ ಮಾಡಿದ್ದೀರಿ? ದೇವೇಗೌಡರು, ಕುಮಾರಸ್ವಾಮಿ ಅವರ ಲೆವಲ್ ನಲ್ಲಿ ಯೋಚನೆ ಬಿಡಿ, ನಿಮ್ಮ ಸಮರ್ಥನೆ ಏನೇ ಇದ್ದರೂ ಅವ ನಮ್ಮ ಬದ್ಧ ವೈರಿ,
ಮೈತ್ರಿ ಸರ್ಕಾರಕ್ಕೆ ಬಗೆದ ದ್ರೋಹ ಸಹಿಸಲು ಸಾಧ್ಯವಿಲ್ಲ, ಅಣ್ಣ ಪಕ್ಷ ಸಂಘಟನೆ ಮಾಡಿ, ಇಲ್ಲ ರಾಜೀನಾಮೆ ಕೊಟ್ಟು ಸಿನಿಮಾ ಮಾಡಿ, ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ನಮಗೆಲ್ಲ ದಯವಿಟ್ಟು ನಿಮ್ಮ ಕೈಯಾರ ವಿಷ ಕೊಟ್ಬಿಡಿ ಬ್ರದರ್ ಪ್ಲೀಸ್ ಎಂದೆಲ್ಲಾ ಪೋಸ್ಟ್ ಹಾಕಿ ಆಕ್ರೋಶ ಹೊರ ಹಾಕ್ತಿದ್ದಾರೆ.
ಹಲವರ ಸಮರ್ಥನೆ:
ಇನ್ನು ಸಾಕಷ್ಟು ಮಂದಿ ತಮ್ಮದೇ ಧಾಟಿಯಲ್ಲಿ ನಿಖಿಲ್ ನಡೆ ಮತ್ತು ವರ್ತನೆಗೆ ಆಕ್ರೋಶ ಹೊರ ಹಾಕ್ತಿದ್ರೆ. ಇನ್ನು ಹಲವರು ನಿಖಿಲ್ ಕುಮಾರಸ್ವಾಮಿ ಅವರ ನಡೆಯನ್ನ ಸಮರ್ಥಿಸಿಕೊಳ್ತಿದ್ದಾರೆ. ನಿಜವಾದ ನಾಯಕತ್ವದ ಗುಣ, ಉತ್ತಮ ಸಂದೇಶ ಸರ್. ಒಬ್ಬ ಜನ ನಾಯಕನಾಗಲು ಇನ್ನೇನು ಬೇಕು, ನಿಮ್ಮ ರಾಜಕೀಯ ಜೀವನದಲ್ಲಿ ಯಶಸ್ಸು ಸಾಧಿಸುವಿರಿ ಎಂಬುದಕ್ಕೆ ಇಷ್ಟು ಸಾಕು. ಯಾರು ಏನೇ ಹೇಳಲಿ, ನಿಮ್ಮ ಶುಭಾಶಯದಲ್ಲಿ ತಪ್ಪಿಲ್ಲ. ಒಳ್ಳೆಯದು ಅಂತೆಲ್ಲಾ ಸಮರ್ಥಿಸಿಕೊಳ್ತಿದ್ದಾರೆ.
ನಿಖಿಲ್ ನಡೆ ಇನ್ನೂ ನಿಗೂಢ:
ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಜಕಾರಣದಿಂದ ದೂರ ಸರಿದಂತೆ ಕಾಣ್ತಿರೋ ನಿಖಿಲ್​ಗೆ  ಇದು ಬಿಸಿ ತುಪ್ಪವೇ ಹೌದು.  ಒಂದು ಹಂತದಲ್ಲಿ ರಾಜಕೀಯದಿಂದ ದೂರ ಉಳಿದು, ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯಲು ನಿಖಿಲ್ ನಿರ್ಧರಿಸಿದಂತೆ ಕಾಣ್ತಿದೆ.  ಹೀಗಾಗಿ ಪಕ್ಷದ ಯುವ ಸಾರಥ್ಯ ವಹಿಸಿರುವ ನಿಖಿಲ್ ಅವರ ಮುಂದಿನ ನಡೆ ಏನು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಏನೇ ಆಗ್ಲೀ, ಪಕ್ಷ ಮತ್ತು ಕುಮಾರಸ್ವಾಮಿ ಅವರನ್ನೇ ನಂಬಿರುವ ಅಸಂಖ್ಯಾತ ಅಭಿಮಾನಿಗಳು, ಕಾರ್ಯಕರ್ತರು ಮಾತ್ರ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡ್ತಿದ್ದಾರೆ. ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರತಿಜ್ಞೆಗೆ ನಿಖಿಲ್ ಕೈ ಜೋಡಿಸ್ತಾರ? ಅಥವಾ ರಾಜಕಾರಣದಿಂದ ದೂರಾಗಿ ಸಿನಿಮಾ ಕ್ಷೇತ್ರದಲ್ಲೇ ಮುಂದುವರಿತಾರ ಅನ್ನೋದನ್ನ ಕಾದುನೋಡ್ಬೇಕಿದೆ.
….
ಡಿ.ಶಶಿಕುಮಾರ್, ಮಂಡ್ಯ.

RELATED ARTICLES

Related Articles

TRENDING ARTICLES