Saturday, November 16, 2024

ತನ್ನ ಕಾರುಗಳನ್ನೇ ನೀಡಿ ಕೊರೊನಾ ವಾರಿಯರ್ಸ್ ಬೆನ್ನಿಗೆ ನಿಂತ ಮಾಜಿ ಸಚಿವ

ಮಂಗಳೂರು: ಕೋವಿಡ್ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗೆ  ತನ್ನ ಸ್ವಂತ ಕಾರುಗಳನ್ನೇ ನೀಡಿ ಮಾಜಿ ಸಚಿವರೊಬ್ಬರು ನೆರವಾಗಿದ್ದಾರೆ. ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್ ಅವರೇ ಈ ರೀತಿಯಾಗಿ ನೆರವಾದ ಮಾಜಿ ಸಚಿವರಾಗಿದ್ದಾರೆ. ಕಳೆದ ಎರಡು ತಿಂಗಳ ಲಾಕ್ ಡೌನ್ ಸಮಯದಲ್ಲಿ ಕರ್ತವ್ಯಕ್ಕೆ ತೆರಳಲು ವಾಹನ ವ್ಯವಸ್ಥೆ ಇಲ್ಲದೇ ವೈದ್ಯಕೀಯ ಸಿಬ್ಬಂದಿ, ನರ್ಸ್​​ಗಳು ಹಾಗೂ ಕ್ಲೀನಿಂಗ್ ವಿಭಾಗದ ಸಿಬ್ಬಂದಿಗಳ ಓಡಾಟಕ್ಕೆ ಅನಾನುಕೂಲವಾಗಿತ್ತು. ಇದನ್ನ ಮನಗಂಡ ಮಾಜಿ ಸಚಿವ ಅಭಯಚಂದ್ರ ಜೈನ್ ತನ್ನ ಎರಡು ಕಾರುಗಳನ್ನು ನೀಡಿ ಕೊರೊನಾ ವಾರಿಯರ್ಸ್ ಬೆನ್ನಿಗೆ ನಿಂತಿದ್ದಾರೆ. ತನ್ನ ದುಬಾರಿ ಬೆಲೆಯ ಇನ್ನೋವಾ ಹಾಗೂ ಕಿಯಾ ಹೆಸರಿನ ಕಾರುಗಳನ್ನು ನೀಡಿ ನೆರವಾಗಿದ್ದಾರೆ. ಅಲ್ಲದೆ ಈ ಎರಡು ಕಾರುಗಳಿಗೂ ತನ್ನದೇ ಕಾರು ಚಾಲಕರನ್ನು ಕಳುಹಿಸಿಕೊಟ್ಟಿದ್ದಾರೆ. ಈಗಲೂ ‘ಸಂಡೆ ಲಾಕ್ ಡೌನ್’ ಸಮಯದಲ್ಲಿ ಇವರು ಈ ಸಿಬ್ಬಂದಿಗಳಿಗೆ ಆಸ್ಪತ್ರೆಗೆ ತಲುಪುವಂತಾಗಲು ಕಾರುಗಳನ್ನು ನೀಡುತ್ತಿದ್ದಾರೆ. ಈ ಸಿಬ್ಬಂದಿಗಳು ಮೂಡಬಿದ್ರೆಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಗಳಾಗಿದ್ದಾರೆ. ಮೂಡಬಿದ್ರೆಯಲ್ಲಿ ಮನೆಮಾಡಿಕೊಂಡಿರುವ ಅಭಯಚಂದ್ರ ಜೈನ್ ಅವರು ಅಧಿಕಾರ ಇಲ್ಲದೇ ಹೋದರೂ ಈ ರೀತಿಯಾಗಿ ನೆರವಾಗುವ ಮೂಲಕ ರಾಜ್ಯ ನಾಯಕರ ಗಮನವನ್ನೂ ಸೆಳೆದಿದ್ದಾರೆ. ಆದರೆ ಈ ವಿಚಾರವನ್ನು ಅವರು ಕಳೆದ ಎರಡು ತಿಂಗಳಿನಿಂದ ಪ್ರಚಾರಕ್ಕಾಗಿ ಬಳಸಿಕೊಳ್ಳದೇ ಇರುವುದು ಕೂಡ ಗಮನಾರ್ಹ ಸಂಗತಿಯಾಗಿದೆ. ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟರ್ ನಲ್ಲಿ ಈ ವಿಚಾರವನ್ನ ಕೆಲ ದಿನಗಳ ಹಿಂದಷ್ಟೇ ಪೋಸ್ಟ್ ಮಾಡಿದ್ದು, ಇವರ ಲಾಕ್ ಡೌನ್ ಸಮಯದ ಸೇವೆ ಮುನ್ನೆಲೆಗೆ ಬರುವಂತಾಗಿದೆ. ಇನ್ನು ಇಂತಹ ಸಂದರ್ಭದಲ್ಲಿ ತನಗೆ ಓಡಾಟಕ್ಕೆ ಕಾರಿನ ಅಗತ್ಯ ಬಿದ್ದರೆ ಅವರು ತನ್ನ ಪತ್ನಿಯ ಕಾರಿಗೆ ಮೊರೆಹೋಗುತ್ತಿದ್ದರು. ಅಭಯಚಂದ್ರ ಜೈನ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಯುವಜನ, ಕ್ರೀಡಾ ಮೀನುಗಾರಿಕಾ ಸಚಿವರಾಗಿದ್ದರು. ಟೂರಿಸ್ಟ್ ಹಾಗೂ ಟ್ರಾನ್ಸ್​ಪೋರ್ಟ್​​ ವ್ಯವಸ್ಥೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಮೂಡಬಿದ್ರೆಯ ಸರ್ಕಾರಿ ಆಸ್ಪತ್ರೆಯ ವೈದ್ಯರು ನೆರವನ್ನ ಕೇಳಿದ್ದರು. ಆದ್ದರಿಂದ ಮಾಜಿ ಸಚಿವರು ತನ್ನ ಎರಡು ಕಾರುಗಳನ್ನೇ ನೀಡಿ ನೆರವಾಗಿ ಕೊರೊನಾ ವಾರಿಯರ್ಸ್ ಗೆ ನೆರವಾಗಿದ್ದಾರೆ.

RELATED ARTICLES

Related Articles

TRENDING ARTICLES