ಶಿವಮೊಗ್ಗ : ಸೊರಬ ಶಾಸಕ ಕುಮಾರ್ ಬಂಗಾರಪ್ಪ, ನಡು ರಸ್ತೆಯಲ್ಲಿಯೇ, ಮಹಿಳೆಯೋಬ್ಬರಿಗೆ ಅವಾಜ್ ಹಾಕಿರುವ ವಿಡಿಯೊವೊಂದು ವೈರಲ್ ಆಗಿದ್ದು, ಈ ವೈರಲ್ ಆಗಿರುವ ವಿಡಿಯೋ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊರಬದ ಸಾಗರ ರಸ್ತೆಯಲ್ಲಿರುವ ಸಿಮೆಂಟ್ ಅಂಗಡಿಯೊಂದರ ಮುಂಭಾಗ ಲಗ್ಗೇಜ್ ವಾಹನವೊಂದು ಸಿಮೆಂಟ್ ಮೂಟೆ ಇಳಿಸಲು ರಸ್ತೆಗೆ ಅಡ್ಡಲಾಗಿ ನಿಂತಿದೆ. ಇದೇ ರಸ್ತೆಯಲ್ಲಿ ಶಾಸಕರು ಸಾಗುವಾಗ ವಾಹನದಿಂದ ಇಳಿದು ನಡು ರಸ್ತೆಯಲ್ಲಿ ಮಹಿಳೆಗೆ ಬೈದಿದ್ದಾರೆ. ಬೈದಿದ್ದಕ್ಕೆ ಮಹಿಳೆ ಇದು ನನ್ನ ಕೆಲಸವಲ್ಲ ವಾಹನದ ಚಾಲಕನ ಕೆಲಸ ಎಂದು ಸಮಜಾಯಿಷಿ ನೀಡಿದ್ದಾರೆ. ಸಮಜಾಯಿಷಿ ನೀಡಿರುವುದಕ್ಕೆ ವಾಹನ ಚಾಲಕ ರಸ್ತೆಗೆ ಅಡ್ಡಲಾಗಿ ನಿಲ್ಸಿದರೆ ಮಾಲೀಕರು ತಿಳಿಹೇಳಬೇಕಲ್ಲವೇ ಎಂದು ಶಾಸಕ ಗದರಿಸಿದ್ದಾರೆ. ಅಷ್ಟು ಹೇಳಿ ಮಹಿಳೆ ಅಂಗಡಿಯೊಳಗೆ ಹೋಗಿದ್ದಾರೆ. ಆದರೆ ಶಾಸಕರು ಚಿಫ್ ಆಫೀಸರಿಗೆ ಸ್ಥಳಕ್ಕೆ ಬರಲು ಹೇಳಿ ಅಂಗಡಿಯ ಲೈಸೆನ್ಸ್ ರದ್ದು ಮಾಡಲು ಸೂಚಿಸುವೆ ಎಂದು ದರ್ಪ ತೋರಿದ್ದಾರೆ. ಅಷ್ಟು ಹೊತ್ತಿಗೆ ಅವರ ಹಿಂದೆ ವಾಹನಗಳು ಟ್ರಾಫಿಕ್ ಜಾಮ್ ನಿಂದ ಸಾಲುಗಟ್ಟಿ ನಿಂತಿವೆ. ಈ ವಿಡಿಯೋವನ್ನ ಶಾಸಕರೇ ತಮ್ಮ ಕುಮಾರ್ ಬಂಗಾರಪ್ಪ ಫೇಸ್ ಬುಕ್ ನಲ್ಲಿ ವೈರಲ್ ಮಾಡಿದ್ದಾರೆ. ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ಇಷ್ಟೊಂದು ಅವಾಂತರ ಕಡಿಮೆಯಾಗುತ್ತಿತ್ತು. ಅದು ಮಹಿಳೆಗೆ ಬೈದಿರುವುದು ಶಾಸಕರಿಗೆ ಶೋಭೆ ತರೊಲ್ಲ, ಬಡಚಾಲಕನ ಮೇಲೆ ಹೌಹಾರಿದ್ದೀರಿ ಆದರೆ ನಿಮ್ಮಿಂದಲೇ ರಸ್ತೆ ಜಾಮ್ ಆಗಿದೆ, ಇದಕ್ಕೆ ಯಾರು ಹೊಣೆ, ಪರವಾನಗಿ ಕಸಿದುಕೊಳ್ಳುವುದಾಗಿ ಹೇಳಿರುವ ಶಾಸಕರ ಹೇಳಿಕೆಗೆ ಮತ್ತೋರ್ವ ನೆಟ್ಟಿಗರು ಕಸಿದುಕೊಳ್ಳುವುದು ಕೋತಿ ಮಾನವನಲ್ಲವೆಂದು ಖಾರವಾಗಿ ಕಾಮೆಂಟ್ಸ್ ನ್ನ ನೆಟ್ಟಿಗರು ಹಾಕಿದ್ದಾರೆ. ಸಾವಿರಕ್ಕೂ ಅಧಿಕ ಪರ ಮತ್ತು ವಿರೋಧದ ಕಾಮೆಂಟ್ಸ್ ಗಳು ಕಂಡುಬಂದಿದ್ದು, ಇದರಲ್ಲಿ ಪರಕ್ಕಿಂತ ವಿರೋಧವೇ ಹೆಚ್ಚು ಕಂಡು ಬಂದಿರುವುದು ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಮುಖಭಂಗವಾದಂತಾಗಿದೆ.