ಶಿವಮೊಗ್ಗ : ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಪ್ರತಿದಿನವೂ ಕೊರೋನಾದಿಂದ ಸಾವುಗಳು ಸಂಭವಿಸುತ್ತಲೇ ಇದೆ. ಇಷ್ಟೆಲ್ಲಾ ಆತಂಕಗಳು ಇದ್ರೂ ಕೂಡ ನಮ್ಮ ಜನಪ್ರತಿನಿಧಿಗಳು ಗುದ್ದಲಿ ಪೂಜೆ ಮಾಡಲೇಬೇಕು. ಕಾರ್ಯಕ್ರಮಗಳ ಉದ್ಘಾಟನೆ ಮಾಡಲೇಬೇಕು. ಜನರಿಗೆ, ಬುದ್ಧಿ ಹೇಳಬೇಕಾದ ಜನಪ್ರತಿನಿಧಿಗಳೇ, ಮೈಮರೆತು ವರ್ತಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಶಿವಮೊಗ್ಗದ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಸರ್ಕಾರದ ಆದೇಶ ಉಲ್ಲಂಘಿಸುವ ಜೊತೆಗೆ, ಸಾಮಾಜಿಕ ಅಂತರವನ್ನು ಕೂಡ ಮರೆತು, ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಜಿ.ಪಂ. ವ್ಯಾಪ್ತಿಯ ಕೊನಗವಳ್ಳಿ ಗ್ರಾಮದಲ್ಲಿ, ಇಂದು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ 25 ಲಕ್ಷ ರೂ. ಮೊತ್ತದ ಕಾಂಕ್ರಿಟ್ ರಸ್ತೆಗೆ ಚಾಲನೆ ನೀಡಿದ್ರು. ಈ ವೇಳೆ, ನೂರಾರು ಮಂದಿ ಸ್ಥಳಿಯರು, ಜನಪ್ರತಿನಿಧಿಗಳು, ಗುಂಪು ಗೂಡಿಕೊಂಡಿದ್ರು. ಆದ್ರು ಕೂಡ, ಇದಕ್ಕೆ ಕ್ಯಾರೇ ಎನ್ನದ ಶಾಸಕರು, ಜನರಿಗೆ ಬುದ್ದಿ ಹೇಳುವ ಬದಲಾಗಿ, ಇವರೇ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವಿಲ್ಲದೇ, ಗುದ್ದಲಿ ಪೂಜೆ ನೆರವೇರಿಸಿದ್ರು. ಒಂದು ಕಡೆ ಮಾಸ್ಕ್ ಧರಿಸದೇ ಸಂಚರಿಸುವ ಸಾರ್ವಜನಿಕರಿಗೆ ದಂಡ ವಿಧಿಸಲಾಗುತ್ತಿದ್ದು, ಜನಪ್ರತಿನಿಧಿಗಳೇ ಸರ್ಕಾರದ ರೂಲ್ಸ್ ಫಾಲೋ ಮಾಡ್ತಿಲ್ಲ. ಇವರಿಗೇನ್ ಹೇಳಬೇಕು. ನೀವೆ ಹೇಳಿ.