ಶಿವಮೊಗ್ಗ : ಸರ್ಕಾರವೇ ಸಾರಿ ಸಾರಿ ಹೇಳುತ್ತಿದೆ. ನಿನ್ನೆ ಸಚಿವ ಕೆ.ಎಸ್. ಈಶ್ವರಪ್ಪನವರೂ ಹೇಳಿದ್ದಾರೆ. ಮಾಸ್ಕು ಧರಿಸಿ, ಸಾಮಾಜಿಕ ಅಂತರ ಮರೆಯದಿರಿ ಅಂತ. ಆದ್ರೆ, ಈ ತಪ್ಪನ್ನು ಜನರು ಮಾಡಿದ್ರೆ ಮಾತ್ರ ತಪ್ಪಾ ಎನ್ನುತ್ತಿದ್ದಾರೆ ಸಾರ್ವಜನಿಕರು. ಎಸ್, ಇಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೂಡ ಮಾಸ್ಕ್ ಧರಿಸದೇ, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಅವರೇ, ಮಾಸ್ಕ್ ಧರಿಸಿ, ಕೊರೋನಾದಿಂದ ದೂರವಿರಿ ಎಂದು ಸಂದೇಶ ನೀಡಿದ್ದಾರೆ. ಅದರಲ್ಲೂ ಶಿಕಾರಿಪುರದಲ್ಲಿ, ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಶಿಕಾರಿಪುರದಲ್ಲಿ 26 ಪಾಸಿಟಿವ್ ಕೇಸುಗಳು ಧೃಡವಾಗಿವೆ. ಆದರೂ, ಸಂಸದ ಬಿ.ವೈ. ರಾಘವೇಂದ್ರ ಇಂದು ಮಾಸ್ಕ್ ಧರಿಸದೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪುರಸಭೆಯ ಇಬ್ಬರು ಕಾಂಗ್ರೆಸ್ ಸದಸ್ಯರು, ಸದಸ್ಯತ್ವ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದ್ರು. ಇದೇ ವೇಳೆ ಮೂವರು ಪಕ್ಷೇತರ ಸದಸ್ಯರು, ಕೂಡ ಬಿಜೆಪಿಗೆ ಸೇರ್ಪಡೆಯಾದ್ರು. ಆದರೆ, ಸಾರ್ವಜನಿಕರಿಗೆ ತಿಳಿ ಹೇಳಬೇಕಾದ ಸಂಸದರೇ ಈ ರೀತಿ ಕೊರೊನಾ ನಿಯಮ ಉಲ್ಲಂಘಿಸಿ ಮಾಸ್ಕ್ ಧರಿಸದೇ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇವರೇ ಹೀಗೆ ಮಾಡಿದ್ರೆ ಹೇಗೆ ಅಂತಾ ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ. ಮಾಸ್ಕ್ ಧರಿಸದೆ ಸಂಸದರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸರ್ಕಾರದ ನೀತಿ, ನಿಯಮಗಳು ಕೇವಲ ಜನರಿಗೆ ಮಾತ್ರ ಸೀಮಿತವೇ ಎನ್ನುವ ಪ್ರಶ್ನೆ ಎದುರಾಗಿದೆ.