ಮಂಡ್ಯ: ಇತ್ತೀಚೆಗೆ ಮಂಡ್ಯ ಸೇರಿದಂತೆ ರಾಜ್ಯದ ನಾನಾ ಕಡೆ ಹಳೆಯ ಬ್ಲಾಕ್ & ವೈಟ್ ಟಿವಿ ಹಾಗೂ ಹಳೆಯ ರೇಡಿಯೋಗೆ ರಾತ್ರೋ ರಾತ್ರಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದ ಸುದ್ದಿ ಹರಿದಾಡಿತ್ತು. ಅಲ್ದೆ ಈ ಹಳೆಯ ಬ್ಲಾಕ್&ವೈಟ್ TV ಹಾಗೂ ಹಳೆಯ ರೇಡಿಯೋಗೆ ಲಕ್ಷ ಲಕ್ಷ ಕೊಡ್ತಾರೋ ಅನ್ನ ವದಂತಿ ಜಿಲ್ಲೆಯಾದ್ಯಂತ ಹಬ್ಬಿತ್ತು. ಈ ವದಂತಿಯನ್ನೆ ಬಂಡವಾಳ ಮಾಡಿಕೊಂಡು ಜನರಿಗೆ ವಂಚನೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಮಂಡ್ಯದ ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ವದಂತಿ ಹಿಂದಿನ ವಂಚನೆಯನ್ನು ಬಯಲಿಗೆಳೆದಿದ್ದಾರೆ.
ಹೌದು! ಇತ್ತೀಚೆಗೆ ರಾಜ್ಯದಾದ್ಯಂತ ಜನರು ಹಳೇಯ ಬ್ಲಾಕ್&ವೈಟ್ TVಯ ಹಿಂದೆ ಬಿದ್ದಿದ್ದರು. ಈ ಹಳೆಯ ಬ್ಲಾಕ್ ವೈಟ್ ಗೆ TVಗೆ ಯಾರೋ ಲಕ್ಷ ಲಕ್ಷ ಕೊಡ್ತಾರೆ ಅನ್ನೋ ವಂದತಿ ಹಿನ್ನೆಲೆಯಲ್ಲಿ ಎಲ್ಲರೂ ಈ ಟಿವಿಗಾಗಿ ಹುಡುಕಾಟ ನಡೆಸಿದ್ರು. ಆದ್ರೆ ಈ ಹಳೆಯ ಟಿವಿಗೆ ಲಕ್ಷ ಕೊಡ್ತಾರೆ ಅನ್ನೋ ಮಾತು ನಂಬಿ ಜಿಲ್ಲೆಯಲ್ಲಿ ಹಲವಾರು ಜನರು ವಂಚನೆಗೆ ಒಳಗಾಗಿದ್ರು. ಈ ವಂಚನೆ ಸುದ್ದಿಯ ಜಾಡು ಹಿಡಿದ ಮಂಡ್ಯದ ಮಳವಳ್ಳಿ ಗ್ರಾಮಾಂತರ ಪೊಲೀಸರು ಇದೀಗ ಆ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ರೀತಿ ವದಂತಿ ಸೃಷ್ಟಿಸಿ ಜನರನ್ನು ವಂಚನೆ ಮಾಡ್ತಿದ್ದ 8 ಜನರ ತಂಡವನ್ನು ಬಂಧಿಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಇನ್ನು ಬಂಧಿತ ಆರೋಪಿಗಳಿಂದ 1 ಕಾರು, 2 ಬೈಕ್ ಸೇರಿದಂತೆ 10.36 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳು ಇಂಜಿನಿಯರ್ ಒಬ್ಬರಿಗೆ ಬರೋಬ್ಬರಿ 22 ಲಕ್ಷ ರೂ.ಗಳನ್ನು ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದೆ. ಕೊಳ್ಳೇಗಾಲ ಗ್ರಾಮದ ಬಾಬು, ಸಲ್ಲು, ಸಾಜೀದ್, ಸುರೇಶ ಮೂರ್ತಿ, ಪಿ. ರಾಜೇಶ್, ಉಮೇಶ್, ಸಿ.ರಾಜೇಶ್, ಉಮೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ
ಸೇವೆಯಿಂದ ವಜಾಗೊಂಡ ಪೊಲೀಸ್ ಪೇದೆ ಸಹ ಭಾಗಿಯಾಗಿರೋದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳು ಹಳೆಯ ಟಿವಿಯಲ್ಲಿ ರೆಡ್ ಮರ್ಕ್ಯೂರಿ ಟ್ಯೂಬ್ ಗೆ ಹೆಚ್ಚಿನ ಬೆಲೆಕೊಡುವುದಾಗಿ ನಂಬಿಸಿ ಜನರಿಂದ ಟಿವಿ ಖರೀದಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಮುಗ್ದ ಜನರನ್ನು ನಂಬಿಸಿ ವಂಚನೆ ಮಾಡ್ತಿದ್ರು. ಈ ಕುರಿತಾಗಿ ವಂಚನೆಗೊಳಗಾದ ಬೆಂಗಳೂರಿನ ವ್ಯಕ್ತಿಯೋರ್ವರು ಮಳವಳ್ಳಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದ ಮೇರೆಗೆ ಕಾರ್ಯಾಚರಣೆಗಿಳಿದ ಮಳವಳ್ಳಿ ಪೊಲೀಸರು ಈ ವಂಚನೆ ಜಾಲವನ್ನು ಭೇದಿಸಿ ಎಂಟು ಜನ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ.
ಒಟ್ಟಾರೆ ಈ ಹಳೆಯ ಟಿವಿಗೆ ಲಕ್ಷ ಕೊಡಿಸುವ ಹೆಸರಲ್ಲಿ ರೆಡ್ ಮರ್ಕ್ಯೂರಿ ದಂಧೆ ನಡೆಸಿ ವಂಚನೆ ಮಾಡ್ತಿದ್ದ ಈ ಜಾಲವನ್ನು ಭೇದಿಸಿರೋ ಮಳವಳ್ಳಿ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಪರಶು ರಾಮ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿ ದ್ದಾರೆ. ಅಲ್ದೆ ಜಿಲ್ಲೆಯ ಜನರು ಇಂತಹ ವದಂತಿ ನಂಬಿ ವಂಚನೆಗೆ ಒಳಗಾಗದಂತೆ ಕಿವಿ ಮಾತು ಹೇಳಿದ್ದಾರೆ. ಇನ್ನಾದ್ರು ಜನರು ಎಚ್ಚೆತ್ತುಕೊಳ್ಳಬೇಕಿದೆ.
….
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.