ಮಂಗಳೂರು : ನಿಷೇಧಿತ ಸ್ಯಾಟ್ಲೈಟ್ ಫೋನ್ ಕರಾವಳಿಯಲ್ಲಿ ಮತ್ತೆ ರಿಂಗಣಿಸಿದೆ. ಇತ್ತೀಚಿನ 6 ದಿನಗಳ ಅವಧಿಯಲ್ಲಿ 2 ಬಾರಿ ಸ್ಯಾಟ್ಲೈಟ್ ಫೋನ್ ರಿಂಗಣಿಸಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅರಣ್ಯ ಪ್ರದೇಶ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಸಂಪರ್ಕಕಕ್ಕೆ ಬಂದಿರೋದನ್ನ ರಾಷ್ಟ್ರೀಯ ತನಿಖಾ ಸಂಸ್ಥೆ ‘ರಾ’ ಗಮನಕ್ಕೆ ಬಂದಿದೆ.
ತನಿಖೆ ಜಾಡು ಹಿಡಿದ ಆಂತರಿಕ ಭದ್ರತಾ ದಳ ಹಾಗೂ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ ಎಂದು ತಿಳಿದುಬಂದಿದೆ. ಇತ್ತ ಎಲ್ಲರ ಚಿತ್ತ ಕೊರೋನಾದತ್ತ ನೆಟ್ಟಿರೋ ಬೆನ್ನಿಗೆ ಇಂತಹ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಕಳೆದ ವರ್ಷವೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗೋವಿಂದೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸ್ಯಾಟ್ಲೈಟ್ ಫೋನ್ ಸದ್ದು ಮಾಡಿದ್ದು, ಆಂತರಿಕ ಭದ್ರತಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದೀಗ ಮತ್ತೆ ಕರಾವಳಿ ಜಿಲ್ಲೆಗಳಲ್ಲಿ ನಿಷೇಧಿತ ‘ತುರಾಯ್’ ಸ್ಯಾಟ್ಲೈಟ್ ಫೋನ್ ಸಂಪರ್ಕಕಕ್ಕೆ ಬಂದಿದ್ದು, ತನಿಖಾಧಿಕಾರಿಗಳಿಗೆ ಸವಾಲಾಗಿದೆ.
ಸಾಮಾನ್ಯವಾಗಿ ಇಂತಹ ಸ್ಯಾಟ್ಲೈಟ್ ಫೋನ್ ಗಳನ್ನ ಮೊಬೈಲ್ ನೆಟ್ ವರ್ಕ್ ಸಂಪರ್ಕಕಕ್ಕೆ ಸಿಗದ ಹಡಗುಗಳಲ್ಲಿ ಬಳಸುತ್ತಾರೆ. ಆದರೆ 2008 ರ ಮುಂಬೈ ದಾಳಿಯಲ್ಲಿ ಲೊಕೇಶನ್ ಟ್ರೇಸ್ ಮಾಡಲು ಹಾಗೂ ಸಂವಹನ ನಡೆಸಿರುವ ರೀತಿ ಪತ್ತೆ ಮಾಡಲು ಅಸಾಧ್ಯವಾದ ಈ ಸ್ಯಾಟ್ಲೈಟ್ ಫೋನ್ ಅನ್ನೇ ಲಷ್ಕರ್-ಇ-ತೊಯ್ಬಾದ ಭಯೋತ್ಪಾದಕರು ಬಳಸಿದ್ದರು. ಆ ನಂತರ ದೇಶಾದ್ಯಂತ ಸ್ಯಾಟ್ಲೈಟ್ ಫೋನ್ ಅನ್ನ ನಿಷೇಧಿಸಲಾಗಿದೆ. ಆದರೆ ಕರಾವಳಿಯಲ್ಲಿ ಈ ರೀತಿ ಪದೇ ಪದೇ ಸ್ಯಾಟ್ಲೈಟ್ ಫೋನ್ ಸದ್ದು ಮಾಡುತ್ತಿರುವುದು ಆತಂಕ ಸೃಷ್ಟಿಸಿದೆ. ಈ ಹಿಂದೆ 2019 ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಯಾಟ್ ಲೈಟ್ ಫೋನ್ ಬಳಸಿದ್ದ ಇಟಲಿಯ ನರ್ಸ್ ವೊಬ್ಬರನ್ನ ಸಿಗ್ನಲ್ ಟ್ರೇಸ್ ಮಾಡುವ ಮೂಲಕ CISF ಅಧಿಕಾರಿಗಳು ಬಂಧಿಸಿದ್ದರು. ಆದರೆ ಇದೀಗ ಕರಾವಳಿಯಲ್ಲಿ ಸಮಾಜಘಾತುಕ ಶಕ್ತಿಗಳು ದುಷ್ಕೃತ್ಯ ನಡೆಸೋದಕ್ಕಾಗಿ ಈ ಸ್ಯಾಟ್ಲೈಟ್ ಫೋನ್ ಬಳಸುತ್ತಿದ್ದಾರೆಯೋ ಅನ್ನೋ ಅನುಮಾನ, ಆತಂಕ ಶುರುವಾಗಿದೆ.
–ಇರ್ಷಾದ್ ಕಿನ್ನಿಗೋಳಿ, ಮಂಗಳೂರು