ಮಂಡ್ಯ: ಕೆಆರ್ಎಸ್ ಉಳಿಸುವ ದೃಷ್ಠಿಯಿಂದ ಮಂಡ್ಯ ಜಿಲ್ಲೆಯನ್ನು ಬಂದ್ ಮಾಡಲು ಇಂದು ನಡೆದ ವಿವಿಧ ಸಂಘಟನೆಗಳ ಸಭೆ ಒಮ್ಮತ ನಿರ್ಣಯ ತೆಗೆದುಕೊಂಡಿದೆ.
ಮಂಡ್ಯ ನಗರದ ಹಿಂದಿ ಭವನದಲ್ಲಿ ಕೆ.ಆರ್.ಎಸ್. ಉಳಿಸಿ ಹೋರಾಟ ಸಮಿತಿ ನೇತೃತ್ವದ ಸಭೆಯಲ್ಲಿ ರೈತ ಸಂಘ, ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಕನ್ನಡಿಗರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆಗೆ ಕಂಟಕ ಎದುರಾಗಿದೆ.
ಕೆ.ಆರ್.ಎಸ್. ಉಳಿವಿನ ದೃಷ್ಟಿಯಿಂದ ಅಣೆಕಟ್ಟು ಸುತ್ತಮುತ್ತ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಕಲ್ಲು ಗಣಿಗಾರಿಕೆಯನ್ನ ನಿಷೇಧಿಸುವಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ.
ಸರ್ಕಾರ ಮತ್ತು ಜಿಲ್ಲಾಡಳಿತ ಹೋರಾಟ ಮಾಡಿದ ಸಂದರ್ಭದಲ್ಲಿ ಮಾತ್ರ ನಿಷೇಧ ಮಾಡಿ ಬಳಿಕ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡುತ್ತಿವೆ. ದಿನೇ ದಿನೇ ಅವ್ಯಾಹತವಾಗಿ ಮೆಗ್ಗರ್ ಬ್ಲಾಸ್ಟ್ ನಿಂದ ಬಂಡೆಗಳನ್ನ ಸಿಡಿಸುತ್ತಿರೋದು ಅಣೆಕಟ್ಟೆಯ ಅವನತಿಗೆ ಕಾರಣವಾಗಿದೆ.
ಹೀಗಾಗಿ ಕೆ.ಆರ್.ಎಸ್ ಉಳಿವಿಗಾಗಿ ಅಣೆಕಟ್ಟು ವ್ಯಾಪ್ತಿಯ 20 ಕಿಲೋ ಮೀಟರ್ ಪ್ರದೇಶದಲ್ಲಿರುವ ಎಲ್ಲಾ ರೀತಿಯ ಗಣಿಗಾರಿಕೆಯನ್ನ ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲೆಯನ್ನ ಸಂಪೂರ್ಣ ಬಂದ್ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯ್ತು. ಶನಿವಾರ ಈ ಸಂಬಂಧ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಕೊಡಗು ಜಿಲ್ಲೆಯ ವಿವಿಧ ಸಂಘಟನೆಗಳನ್ನೊಳಗೊಂಡ ಮತ್ತೊಂದು ಸಭೆ ನಡೆಸಿ, ಬಂದ್ ಗೆ ದಿನಾಂಕ ನಿಗದಿ ಪಡಿಸುವ ನಿರ್ಣಯ ಕೈಗೊಳ್ಳಲಾಯಿತು.
ಮಂಡ್ಯ ಜಿಲ್ಲಾ ಬಂದ್ ಕರೆಗೆ ನಿರ್ಣಯ; ಕಾರಣ ಏನು ಗೊತ್ತಾ?
TRENDING ARTICLES