ಮೈಸೂರು : ಇನ್ನು ಮೂರು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಮಧುಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕಿದ್ದ ಮಧುಮಗ ಮಸಣದ ದಾರಿ ಹಿಡಿದಿದ್ದಾನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿದ್ರೂ ಸಂಭಂಧಿಕರು ಶಂಕೆ ವ್ಯಕ್ತಪಡಿಸ್ತಿದ್ದಾರೆ. 24 ಗಂಟೆಗಳ ಕಾಲ ಶೋಧನೆ ನಂತರ ಡೆಡ್ ಬಾಡಿ ಸಿಕ್ಕಿದೆ. ಸಂಭಂಧಿಕರ ಆರೋಪದಿಂದ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್ ಪಡೆಯುತ್ತಿದೆ.
ನೀರಿನಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು ಮೈಸೂರು-ಟಿ.ನರಸೀಪುರ ಮುಖ್ಯರಸ್ತೆಯ ವರುಣಾ ಕೆರೆಯಲ್ಲಿ. ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹೆಸರು ಮಂಚೇಗೌಡ. ವಯಸ್ಸು 34 ವರ್ಷ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮುತ್ತಣ್ಣಹಳ್ಳಿ ಗ್ರಾಮದ ನಿವಾಸಿ. ಕಳೆದ 14 ವರ್ಷಗಳಿಂದ ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿಯಲ್ಲಿ ಫೀಲ್ಡ್ ಆಫೀಸರ್. ಇದೇ ಭಾನುವಾರ ಅಂದ್ರೆ ಜುಲೈ 26 ಕ್ಕೆ ಹಸೆಮಣೆ ಏರಬೇಕಿದ್ದ ಮಂಚೇಗೌಡ ಎಲ್ಲಾ ಸಿದ್ದತೆ ಮಾಡಿಕೊಂಡಿದ್ರು. ಇದ್ದಕ್ಕಿದ್ದಂತೆ ಕಾಡಿದ ಬೆನ್ನು ನೋವು ಆತ್ಮಹತ್ಯೆಗೆ ಪ್ರೇರೇಪಿಸಿದೆ. ಡೆತ್ ನೋಟ್ ಬರೆದ ಮಂಚೇಗೌಡ ವರುಣಾ ಕೆರೆಗೆ ಹಾರಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ, ಯಾರನ್ನೂ ತನಿಖೆ ಮಾಡಬೇಡಿ. ನಿಶ್ಚಿತಾರ್ಥಕ್ಕೆ ಮೊದಲೇ ಬೆನ್ನುನೋವು ಬಂದಿದ್ರೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರಲಿಲ್ಲ. ಆ ಹುಡುಗಿಯನ್ನ ಮುಟ್ಟಿಲ್ಲ. ತಪ್ಪಾಗಿದ್ದರೆ ಕ್ಷಮಿಸಿ ಎಂಬ ಉಲ್ಲೇಖವಿದ್ದ ಡೆತ್ ನೋಟ್ ಸಿಕ್ಕಿದೆ.
ಸೋಮವಾರ ಸಂಜೆ ಕೆರೆಗೆ ಹಾರಿದ್ದ ಮಂಚೇಗೌಡ ಮೃತದೇಹ ಇಂದು ಸಿಕ್ಕಿದೆ. ಬೆನ್ನು ನೋವಿಗಾಗಿ ಮಂಚೇಗೌಡ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬ ಆರೋಪ ಸಂಭಂಧಿಕರಿಂದ ಬರುತ್ತಿದೆ. ಫ್ಯಾಕ್ಟರಿಯವರಿಗೂ ಮಂಚೇಗೌಡನ ನಡುವೆ ಏನೋ ನಡೆದಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಚೇಗೌಡ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ ಅಂತಾರೆ. ಮದುವೆಗಾಗಿ ಬಟ್ಟೆ, ಚಿನ್ನಾಭರಣ ಎಲ್ಲವನ್ನೂ ಖರೀದಿಸಲಾಗಿದೆ. ಕೊರೊನಾ ಹಿನ್ನಲೆ ಮನೆ ಮುಂದೆಯೇ ಸರಳವಾಗಿ ಮದುವೆ ಆಚರಿಸಿಕೊಳ್ಳಲು ಸಿದ್ದತೆ ನಡೆಸಿದ್ದಾನೆ. ಹೀಗಿರುವಾಗ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸಂಧರ್ಭ ಹೇಗೆ ಬಂತು ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಮಂಚೇಗೌಡ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಸಂಭಂಧಿಕರು ಒತ್ತಾಯಿಸಿದ್ದಾರೆ.ದೂರು ನೀಡಲು ನಿರ್ಧರಿಸಿದ್ದಾರೆ. ಮಂಚೇಗೌಡ ಸಾವಿಗೆ ಕಾರಣ ಬೆನ್ನುನೋವೋ ಅಥವಾ ಫ್ಯಾಕ್ಟರಿ ಕಿರುಕುಳವೋ ತನಿಖೆಯಲ್ಲಿ ಬಹಿರಂಗವಾಗಬೇಕಿದೆ…