ಮಂಗಳೂರು : ಗ್ರಾಹಕನ ಸೋಗಿನಲ್ಲಿ ಬಂದ ಯುವಕನೊಬ್ಬ ಅಂಗಡಿ ಮಾಲಕಿಯ ಚಿನ್ನದ ಸರವನ್ನೇ ಕದ್ದೊಯ್ದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯ ಚರಂತಿಪೇಟೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ 12.10 ರ ವೇಳೆಗೆ ಈ ಘಟನೆ ನಡೆದಿದ್ದು, ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಆರೋಪಿತ ಯುವಕ ಗ್ರಾಹಕನಂತೆ ಆಗಮಿಸಿದ್ದು, ತಾನು ಬಂದ ಸ್ಕೂಟರ್ ನ ನೋಂದಣಿ ಸಂಖ್ಯೆ ತಿಳಿಯದಂತಾಗಲು ಗಾಡಿಯನ್ನ ಅಣತಿ ದೂರದಲ್ಲಿಟ್ಟು ಆಗಮಿಸಿದ್ದಾನೆ. ಬಂದವನೇ ಬಿಸ್ಕೆಟ್ ಅನ್ನ ಕೇಳಿದ್ದು, ಇನ್ನೇನು ಅಂಗಡಿಯ ಮಾಲಕಿ ಸೀತಾ ಬಿಸ್ಕೆಟ್ ಕೊಡಲು ಮುಂದಾಗುತ್ತಿದ್ದಂತೆ ಆರೋಪಿ ಯುವಕ ಆಕೆಯ ಕತ್ತಿನಲ್ಲಿದ್ದ ಒಂದು ಪವನ್ ಚಿನ್ನದ ಸರವನ್ನ ಕೈ ಹಾಕಿ ಎಳೆದೊಯ್ದಿದ್ದಾನೆ. ಮೊದಲೇ ಪ್ಲ್ಯಾನ್ ಮಾಡಿದಂತೆ ಅಣತಿ ದೂರದಲ್ಲಿ ಚಾಲೂವಿನಲ್ಲೇ ಇರಿಸಿದ್ದ ತನ್ನ ಕಪ್ಪು ಬಣ್ಣದ ಆ್ಯಕ್ಟಿವಾವನ್ನ ಏರಿ ಪರಾರಿಯಾಗಿದ್ದಾನೆ. ಈತ ಕಾರ್ನಾಡ್ ರಸ್ತೆಯಾಗಿ ಹೆದ್ದಾರಿ ಮೂಲಕ ಮಂಗಳೂರು ಕಡೆ ಪರಾರಿಯಾಗಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಕಳ್ಳನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು