ಚಿಕ್ಕಮಗಳೂರು : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದಿಗೆ ವರ್ಷದ ಹಿಂದೆ ಅಧಿಕಾರ ಕಳೆದುಕೊಂಡಿದ್ದರು. ಆ ಕರಾಳ ದಿನವನ್ನ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜೆಡಿಎಸ್ ಯುವ ಕಾರ್ಯಕರ್ತರು ರೈತ ಮಹಿಳೆಯರ ಜೊತೆಗೂಡಿ ಭತ್ತದ ನಾಟಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಮೂಡಿಗೆರೆ ತಾಲೂಕಿನ ಪುರ ಗ್ರಾಮದಲ್ಲಿ ನಡೆದ ಈ ಭತ್ತದ ನಾಟಿ ಕಾರ್ಯಕ್ರಮದಲ್ಲಿ ಹತ್ತಾರು ಯುವ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ವಿನಯ್ ರಾಜ್, ಮೋಸದಿಂದ ಕುಮಾರಸ್ವಾಮಿಯವರ ಅಧಿಕಾರ ಕಿತ್ತುಕೊಂಡು ಇಂದಿಗೆ ವರ್ಷವಾಗಿದೆ. ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಜೆಡಿಎಸ್ ಕಾರ್ಯಕರ್ತರೆಲ್ಲಾ ಸಂಕಲ್ಪ ಮಾಡಿದ್ದೇವೆ ಎಂದರು. ಇನ್ನೊಂದೆಡೆ ದಿನೇ-ದಿನೇ ಕೊರೊನಾ ಆರ್ಭಟ ಬೆಂಗಳೂರು ಸೇರಿದಂತೆ ಜಿಲ್ಲೆಯಲ್ಲೂ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಊರು ಬಿಟ್ಟು ಬೆಂಗಳೂರು ಸೇರಿದ್ದ ನೂರಾರು ಯುವಕರು ಇದೀಗ ಮರಳಿ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಹಿಂದಿರುಗಿದ ಯುವಕರು ಭಾಗಿಯಾಗಿದ್ದರು. ಮತ್ತೊಂದೆಡೆ ಆರ್ಥಿಕವಾಗಿ ಅಷ್ಟೊಂದು ಲಾಭವಲ್ಲದ ಭತ್ತದ ಕೃಷಿಯಿಂದ ರೈತರು ವಿಮುಖವಾಗ್ತಿರೋ ಕಾಲಘಟ್ಟದಲ್ಲಿ ಅವರನ್ನ ಪ್ರೋತ್ಸಾಹಿಸೋ ಕೆಲಸಕ್ಕೆ ಜಿಲ್ಲೆಯ ಯುವ ಜೆಡಿಎಸ್ ಪಣ ತೊಟ್ಟಿದೆ. ರೈತರು ಗದ್ದೆ ಕೆಲಸ ಅಷ್ಟೊಂದು ಲಾಭದಾಯಕವಲ್ಲ ಅಂತ ವಿಮುಖವಾಗ್ತಿರೋದನ್ನ ಗಮನಿಸಿ ಯುವ ಜೆಡಿಎಸ್ ಕಾರ್ಯಕರ್ತರು, ಜಿಲ್ಲಾಧ್ಯಕ್ಷ ವಿನಯ್ ರಾಜ್ ನೇತೃತ್ವದಲ್ಲಿ ರೈತ ಮಹಿಳೆಯರೊಂದಿಗೆ ಸೇರಿ ನಾಟಿ ಕೆಲಸ ಮಾಡಿದ್ದಾರೆ. ಕೊರೊನಾ ಆರ್ಭಟಕ್ಕೆ ಸೆಡ್ಡು ಹೊಡೆದು ಹತ್ತಾರು ಕಾರ್ಯಕರ್ತರು ಹಾಡು ಹೇಳುತ್ತಾ ಹುಮ್ಮಸ್ಸಿನಿಂದ ನಾಟಿ ಕೆಲಸದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರೈತರನ್ನ ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾ ಯುವ ಜೆಡಿಎಸ್ ಹಮ್ಮಿಕೊಂಡಿದ್ದ ಈ ನಾಟಿ ಕಾರ್ಯದಲ್ಲಿ ಮಾಜಿ ಸಚಿವ ಬಿ.ಬಿ ನಿಂಗಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು..
ಸಚಿನ್ ಶೆಟ್ಟಿ ಚಿಕ್ಕಮಗಳೂರು