ಹುಬ್ಬಳ್ಳಿ : ಜುಲೈ 24 ರ ಬಳಿಕ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಇರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮುನ್ಸೂಚನೆ ನೀಡಿದ್ದಾರೆ.
ನಗರದಲ್ಲಿಂದು ಲಾಕ್ ಡೌನ್ ಕುರಿತು ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಸಚಿವ ಸಂಪುಟದಲ್ಲಿ ಸಿಎಂ ಜೊತೆ ಚರ್ಚೆ ಮಾಡುವೆ, ಲಾಕ್ ಡೌನ್ ವಿಸ್ತರಣೆಯೇ ಪರಿಹಾರ ಅಲ್ಲ.. ಹೀಗಾಗಿ 24ರ ನಂತರ ಲಾಕ್ ಡೌನ್ ವಿಸ್ತರಣೆ ಬಹುತೇಕ ಡೌಟ್ ಎಂದರು.
ಡಿಸಿ, ವೈದ್ಯರು, ತಜ್ಞರ ಜೊತೆ ಇನ್ನೊಮ್ಮೆ ಚರ್ಚೆ ಮಾಡಿ ನಾಡಿದ್ದು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಕೊರೋನಾ ನಿಯಂತ್ರಣ ವಿಚಾರದಲ್ಲಿ ಸಚಿವರ ಮಧ್ಯೆ ಸಮನ್ವಯತೆ ಇಲ್ಲ ಅನ್ನೋದು ಸುಳ್ಳು. ಸರ್ಕಾರ ಸೇರಿದಂತೆ ಎಲ್ಲ ಸಚಿವರು ಪ್ರಾಮಾಣಿಕವಾಗಿ ಒಗ್ಗೂಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಸಾಮಾಗ್ರಿಗಳ ಖರೀದಿ ವಿಚಾರದಲ್ಲಿ ಅವ್ಯವಹಾರವಾಗಿಲ್ಲ. ವಿರೋಧ ಪಕ್ಷದವರು ಆರೋಪ ಮಾಡಬೇಕು ಅಂತಾ ಮಾಡಬಾರದು. ರಚನಾತ್ಮಕವಾಗಿ ಟೀಕೆ ಮಾಡಬೇಕು. ವ್ಯರ್ಥ ಆರೋಪ ಸರಿಯಲ್ಲ ಎಂದು ಕಿಡಿ ಕಾರಿದರು.
ಧಾರವಾಡ ಜಿಲ್ಲೆಯಲ್ಲಿ ಇನ್ನೂ ಎರಡು ಸಾವಿರ ಹಾಸಿಗೆಗಳು ರೆಡಿ ಇದೆ. ಆಂಬುಲೈನ್ಸ್ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿರುವೆ. ನಾಡಿದ್ದು ಮತ್ತೆ 7 ಆಂಬುಲೈನ್ಸ್ ಹೊಸದಾಗಿ ಬರಲಿದೆ. ಕಿಮ್ಸ್ ನಲ್ಲಿ ಹೆಚ್ಚುವರಿಯಾಗಿ ಶೀಘ್ರದಲ್ಲೇ 250 ಬೆಡ್ ಗಳ ವ್ಯವಸ್ಥೆ ಮಾಡಲು ಸೂಚನೆ ಮಾಡಿರುವೆ. 3-4 ದಿನಗಳಲ್ಲಿ ಕಿಮ್ಸನಲ್ಲಿ ಹೆಚ್ಚುವರಿ ಬೆಡ್ ಗಳು ಲಭ್ಯವಾಗಲಿದೆ ಎಂದರು.