ಶಿವಮೊಗ್ಗ : ಖಾಸಗಿ ಆಸ್ಪತ್ರೆಗಳ ಅಮಾನವೀಯ ವರ್ತನೆ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಬಹಿರಂಗಗೊಂಡಿದೆ. ಖಾಸಗಿ ಆಸ್ಪತ್ರೆ ಸಿಬ್ಭಂಧಿಗಳ ವರ್ತನೆಯಿಂದಾಗಿ ಗರ್ಭಿಣಿ ಮಹಿಳೆಯೊಬ್ಬರು ನಡುರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಹೌದು, ಇದು ನಡೆದಿರುವುದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಇಲ್ಲಿನ ಕೋಣಂದೂರು ಸಮೀಪದ ಕಂಕಳ್ಳಿ ಗ್ರಾಮದ ನಿವಾಸಿ, ತಮ್ಮ ಪತ್ನಿ ಅನಸೂಯರನ್ನು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯ ಹೆರಿಗೆ ವಾರ್ಡ್ ಸೀಲ್ ಡೌನ್ ಆಗಿದೆ ಎಂದು ತಿಳಿದು ಬಂದಿದ್ದು, ಹೀಗಾಗಿ ಅವರು, ಪಟ್ಟಣದ ಖಾಸಗಿ ಆಸ್ಪತ್ರೆಗೆಳಿಗೆ ಅಲೆದಾಡಿದ್ದಾರೆ. ಮಧ್ಯರಾತ್ರಿ ಖಾಸಗಿ ಆಸ್ಪತ್ರೆ ಸಿಬ್ಭಂಧಿಗಳು ಗರ್ಭಿಣಿ ಎಂದು ತಿಳಿದರೂ ಕೂಡ, ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ. ಈ ವೇಳೆ ಮೂರು ಖಾಸಗಿ ಆಸ್ಪತ್ರೆಗಳಲ್ಲಿಯೂ ಇದೇ ಉತ್ತರ ಬಂದ ಬಳಿಕ, ದಿಕ್ಕೆ ತೋಚದಂತಾಗಿ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕಿಗೆ ಬರುವಷ್ಟರಲ್ಲಿ, ಹೆರಿಗೆ ನೋವು ತೀವ್ರವಾಗಿದ್ದು, ಮಾರುತಿ ಓಮ್ನಿ ಕಾರಿನಲ್ಲಿಯೇ, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ಕಂಗಾಲಾದ ಕುಟುಂಬ, ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣವೇ, ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡ ಹೋಗಿದ್ದಾರೆ. ಅಲ್ಲಿ, ತಾಯಿ ಮತ್ತು ಮಗುವಿಗೆ ಶುಶ್ರೂಷೆ ಮಾಡಲಾಗಿದೆ. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.