Friday, January 17, 2025

ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ ಜಾನಪದ ಲೋಕ

ರಾಮನಗರ :  ಅದು ಜಾನಪದ ಕಲೆಗಳನ್ನ ಪರಿಚಯ ಮಾಡುವ ಪ್ರೇಕ್ಷಣೀಯ ಸ್ಥಳ. ಪ್ರತಿನಿತ್ಯ ಅಲ್ಲಿಗೆ ಸಾವಿರಾರು ಮಂದಿ ಪ್ರವಾಸಿಗರು ಬಂದು ಅಲ್ಲಿನ ಕಲೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಪ್ರವಾಸಿಗರು ಕೊಡುವ ಹಣದಲ್ಲೇ ಅಲ್ಲಿನ ಸ್ವಚ್ಛತೆ ನಿರ್ವಾಹಣೆ ಮಾಡುತ್ತಿದ್ದರು. ಆದ್ರೆ, ಕರೋನಾ ರಣಕೇಕೆ ಆರಂಭವಾದ ದಿನದಿಂದ ಆ ಸ್ಥಳದಲ್ಲಿ ಜನರಿಲ್ಲದೇ ಬಣಗೂಡುತ್ತಿದೆ.

ರಾಮನಗರ ಎಂದೊಡನೆ ನೆನಪಾಗುವುದು ರೇಷ್ಮೆ. ಅದರಂತೆ ರೇಷ್ಮೆ ಜತೆಗೆ ಜನಪದರ ಬದುಕಿನ ಪ್ರತಿಬಿಂಬದಂತಿರುವ ಜಾನಪದ ಲೋಕವು ಇಲ್ಲಿನ ರೇಷ್ಮೆಯಷ್ಟೇ ಪ್ರಸಿದ್ಧಿ. ವಾರಾಂತ್ಯದಲ್ಲಿ ಬರೀ ಚಾರಣ ಮಾಡಿ, ನೀರಾಟ ಆಡಿ ಬೇಜಾರಾಗಿರುವವರಿಗೆ ಜಾನಪದ ಲೋಕ ಒಂದು ವಿಭಿನ್ನ ಅನುಭವ ನೀಡುವ ತಾಣ. ದೇಸಿ ಸೊಗಡಿನಿಂದ ನಳನಳಿಸುವ ಜಾನಪದ ಲೋಕದಲ್ಲಿ ಕಲೆಯ ಆಸ್ವಾದನೆಯ ಜತೆಗೆ ವಾರಾಂತ್ಯವನ್ನು ರಂಜನೀಯವಾಗಿ ಕಳೆಯಬಹುದು. ಬೆಂಗಳೂರಿನಿಂದ ಮೈಸೂರಿನತ್ತ ಪ್ರಯಾಣ ಮಾಡುವವರು ಜಾನಪದ ಲೋಕಕ್ಕೆ ಭೇಟಿ ಕೊಟ್ಟಿ ಅಲ್ಲಿ ಕಲೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಪ್ರವಾಸಿಗರು ಕೊಡುವ ಹಣದಲ್ಲೇ ಲೋಕವನ್ನ ನಿರ್ವಾಹಣೆ ಮಾಡುತ್ತಿದ್ದರು. ಆದ್ರೆ, ಹೆಮ್ಮಾರಿ ಕರೋನಾ ಆರಂಭವಾದ ದಿನದಿಂದ ಆ ಸ್ಥಳದಲ್ಲಿ ಜನರಿಲ್ಲದೇ ಕಂಪ್ಲೀಟ್ ಆಗಿ ಖಾಲಿ ಖಾಲಿಯಾಗಿದೆ. ಕರೋನಾ ಬರುವ ಮುನ್ನ ಪ್ರತಿನಿತ್ಯ 50 ಸಾವಿರ ರೂಪಾಯಿ ಆಧಾಯ ಬರುತ್ತಿತ್ತು. ಆದ್ರೆ, ಇದೀಗ 1500 ರಿಂದ 2000ರೂಪಾಯಿ ಆಧಾಯ ಬರುವುದೇ ಕಷ್ಟಕರವಾಗಿದೆ.

ಅಂದಹಾಗೆ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣದ ಮಧ್ಯೆ 15 ಎಕರೆ ಪ್ರದೇಶದಲ್ಲಿ ಮೈದಳೆದಿರುವ ಜಾನಪದ ಲೋಕದಲ್ಲಿ ವಸ್ತು ಸಂಗ್ರಹಾಲಯ, ಚಿತ್ರ ಕುಟೀರ, ಲೋಕ ಮಹಲ್‌, ದಸರಾ ಗೊಂಬೆ ಮನೆ, ನಮ್ಮ ಹಳ್ಳಿ ಇದ್ದು, ನೋಡುಗರ ಕಣ್ಮನಗಳನ್ನು ತಣಿಸುತ್ತವೆ. ಇದನ್ನ ನೋಡುವುದಕ್ಕೆ ಮೈಸೂರು ಕಡೆಗೆ ಹೋಗುವ ಪ್ರಯಾಸಿಗರು ಜಾನಪದಲೋಕವನ್ನ ನೋಡಿಕೊಂಡು ಹೋಗುತ್ತಿದ್ದರು. ಆದ್ರೆ, ಮೊದಲ ಹಂತದ ಲಾಕ್ಡೌನ್ ನಿಂದಲೂ ಜನರೇ ಬಾರದೆ ಜಾನಪದ ಲೋಕ ಬರಿದಾಗಿದೆ. ಜನರಿಂದ ತುಂಬಿ ತುಳುಕುತ್ತಿದ್ದ ಜಾನಪದ ಲೋಕದಲ್ಲಿ ಈಗ ಬೆರಳೆಣಿಕೆಯಷ್ಟೇ ಜನರು ಬರುತ್ತಿದ್ದಾರೆ.

ಒಟ್ಟಾರೆ ಜನಪದ ಕಲೆಗಳನ್ನ ಪರಿಚಯ ಮಾಡಿಕೊಡುತ್ತಿದ್ದ ಏಕೈಕ ತಾಣ ಎಂದರೆ ಜಾನಪದಲೋಕ. ಆದ್ರೆ, ಲಾಕ್ ಡೌನ್ ನಿಂದ ಇದೀಗ ಪ್ರವಾಸಿಗರಿಲ್ಲದೇ ಜಾನಪದ ಲೋಕ ಖಾಲಿ ಖಾಲಿಯಾಗಿರೋದು ನಿಜಕ್ಕೂ ವಿಪರ್ಯಾಸ.
————————–
ಪ್ರವೀಣ್ ಗೌಡ ಪವರ್ ಟಿವಿ ರಾಮನಗರ

RELATED ARTICLES

Related Articles

TRENDING ARTICLES