ಭಾರತ ಮಹಿಳಾ ಕ್ರಿಕೆಟರ್, ಕ್ರಿಕೆಟ್ ಲೋಕದ ಕ್ರಶ್ ಸ್ಮೃತಿ ಮಂದಾನ 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಸ್ಮೃತಿ ಹುಟ್ಟಿದ್ದು ಮುಂಬೈನಲ್ಲಿ, 1996ರಲ್ಲಿ. ಇವರ ತಂದೆ ಮತ್ತು ಅಣ್ಣ ಜಿಲ್ಲಾ ವಲಯದ ಕ್ರಿಕೆಟ್ ಆಟಗಾರರಾಗಿದ್ರು. ಅಣ್ಣಾ ಅಂಡರ್ 16ನಲ್ಲಿ ಬ್ಯಾಟ್ ಬೀಸುವುದನ್ನು ನೋಡಿ ನಾನೂ ಕೂಡ ಯಾಕೆ ಕ್ರಿಕೆಟರ್ ಆಗ್ಬಾರ್ದು ಅಂತ ಬ್ಯಾಟ್ ಹಿಡಿದರು ಸ್ಮೃತಿ.
ಇನ್ನು ಶ್ರೀಲಂಕಾದ ಕ್ರಿಕೆಟಿಗ ಕುಮಾರ ಸಂಗಕ್ಕಾರ ಸ್ಮೃತಿಗೆ ಸ್ಫೂರ್ತಿಯಂತೆ. ಸಂಗಕ್ಕಾರ ಅವರ ಬ್ಯಾಟಿಂಗ್ ಸ್ಟೈಲ್ ನೋಡಿ ಅದೇ ಸ್ಟೈಲ್ನಲ್ಲಿ ಬ್ಯಾಟ್ ಬೀಸುವುದನ್ನು ಕಲಿತ ಈಕೆ ಸದ್ಯ ವಿಶ್ವಕ್ರಿಕೆಟ್ನ ಸ್ಟಾರ್ ಕ್ರಿಕೆಟರ್… ಯಶಸ್ವಿ ಓಪನರ್.
ಚಿಕ್ಕಂದಿನಿಂದಲೂ ಓದಿನಲ್ಲೂ ಆಸಕ್ತಿ ಹೊಂದಿದ್ದ ಸ್ಮೃತಿಗೆ 10ನೇ ತರಗತಿ ಪಾಸ್ ಆದ್ಮೇಲೆ ಸೈನ್ಸ್ ತಗೋಬೇಕು ಅಂತ ಆಸೆಯಿತ್ತಂತೆ. ಅಮ್ಮನ ಒತ್ತಾಯಕ್ಕೆ ಸೋತು ಕಾಮರ್ಸ್ ಆಯ್ಕೆ ಮಾಡಿಕೊಂಡ್ರಂತೆ. ಅಷ್ಟರಲ್ಲಾಗಲೇ ಭಾರತ ಮಹಿಳಾ ಕ್ರಿಕೆಟ್ ತಂಡದ ಕದ ತಟ್ಟಿದ್ದರು. 2014ರಲ್ಲಿ ಟಿ20 ವರ್ಲ್ಡ್ಕಪ್ ಇದ್ದಿದ್ರಿಂದ ಸ್ಮೃತಿ ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಲು ಇಂಗ್ಲೆಂಡ್ಗೆ ತೆರಳಿದ್ರು. ಹಾಗಾಗಿ ಪಿಯುಸಿ ಬೋರ್ಡ್ ಎಕ್ಸಾಮ್ ಬರೆಯೋಕೆ ಆಗ್ಲಿಲ್ಲ.
ಸ್ಮೃತಿ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ಆಟಗಾರ್ತಿ. ಗುಜರಾತ್ ವಿರುದ್ಧದ ಮ್ಯಾಚ್ ನಲ್ಲಿ ಮಹಾರಾಷ್ಟ್ರ ಪರ 150 ಬಾಲ್ ಗಳಲ್ಲಿ 224 ರನ್ ಬಾರಿಸಿದ್ರು. 2018ರ ಮಹಿಳಾ ಟಿ20 ವರ್ಲ್ಡ್ಕಪ್ನಲ್ಲಿ ಆಡಿದ 5 ಮ್ಯಾಚ್ಗಳಲ್ಲಿ 178 ರನ್ ಗಳಿಸೋ ಮೂಲಕ ಗಮನಸೆಳೆದಿದ್ರು. 2018ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕಿಯಾಗಿ ಆಯ್ಕೆ ಆಗೋ ಮೂಲಕ ಅತಿ ಚಿಕ್ಕ ವಯಸ್ಸಲ್ಲಿ ನಾಯಕತ್ವವಹಿಸಿದ ಭಾರತದ ಮಹಿಳಾ ಕ್ರಿಕೆಟರ್ ಅನ್ನೋ ಕೀರ್ತಿಗೂ ಪಾತ್ರರಾಗಿದ್ದಾರೆ.
ದೇಶದ ಹೆಮ್ಮೆ ಸ್ಮೃತಿ ಮಂದಾನ ಇನ್ನೂ ಎತ್ತರಕ್ಕೆ ಬೆಳೀಲಿ ಅಂತ ಆಶಿಸುತ್ತಾ ಹುಟ್ಟುಹಬ್ಬದ ಶುಭಹಾರೈಕೆ….