Thursday, January 16, 2025

ಮೈಸೂರಿನಲ್ಲಿ ರಾಪಿಡ್ ಟೆಸ್ಟ್ ಆರಂಭ !

ಮೈಸೂರು : ಜಿಲ್ಲೆಯಲ್ಲಿ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ  ಕೊರೊನಾ ಸೋಂಕಿಗೆ ಮೂಗುದಾರ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ.ಕೊರೊನಾ ಹರಡುವ ಸೂಕ್ಷ್ಮ ಪ್ರದೇಶಗಳಲ್ಲಿ ರಾಪಿಡ್ ಟೆಸ್ಟ್ ಮೊರೆ ಹೋಗಿದೆ.ಕೊರೊನಾ ನಿಯಂತ್ರಣಕ್ಕೆ ದಾರಾವಿ ಮಾದರಿ ಅನುಸರಿಸುತ್ತಿದೆ.ವೈರಸ್ ಚೇಸಿಂಗ್ ಮಾದರಿಗೆ ಸ್ಥಳೀಯರು ಸಹ ಕೈಜೋಡಿಸಿದ್ದಾರೆ.
ಕೊರೊನಾ ಹರಡುತ್ತಿರುವ ವೇಗ ಸಾಂಸ್ಕೃತಿಕ ನಗರಿಯನ್ನ ಬೆಚ್ಚಿಬೀಳಿಸಿದೆ. ದಿನೇ ದಿನೇ ಶತಕ ಭಾರಿಸುತ್ತಾ ಮೈಸೂರಿಗರ ನಿದ್ದೆ ಕೆಡಿಸುತ್ತಿದೆ.ಅರ್ಧ ಶತಕ ಪೂರೈಸಿರುವ ಸಾವಿನ‌ ಸಂಖ್ಯೆ ಶಾಕ್ ಕೊಟ್ಟಿದೆ.ಪಾಸಿಟಿವ್ ಹಾಗೂ ಸಾವಿನ ಸಂಖ್ಯೆಯಲ್ಲಿ ಮೈಸೂರಿನ ಎನ್.ಆರ್.ಕ್ಷೇತ್ರ ಬಹುಪಾಲು ಪಡೆದಿದೆ.ಕೊರೊನಾ ನಾಗಾಲೋಟಕ್ಕೆ ಬ್ರೇಕ್ ಹಾಕಲು ದಾರಾವಿ ಮಾದರಿಯಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದ ಜಿಲ್ಲಾಡಳಿತ ಇಂದು ಚಾಲನೆ ಕೊಟ್ಟಿದೆ.ಮನೆ ಮನೆ ಸರ್ವೆ ಕಾರ್ಯ ಇಂದಿನಿಂದ ಆರಂಭವಾಗಿದೆ.೧೫ ಸರ್ವೆ ಟೀಂ ಹಾಗೂ ೧೫ ರಾಪಿಡ್ ಟೆಸ್ಟ್ ಟೀಂ ನಿಂದ ತಪಾಸಣೆ ಆರಂಭವಾಗಿದೆ.ವೈರಸ್ ನ ಹುಡುಕಿಕೊಂಡು ಹೋಗುವ ಕಾನ್ಸೆಪ್ಟ್ ಇದಾಗಿದೆ.ಡಿ.ಹೆಚ್.ಓ.ಡಾ.ವೆಂಕಟೇಶ್ ನೇತೃತ್ವದಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ.ಕೊರೊನಾ ಲಕ್ಷಣ ಕಂಡುಬಂದರೂ ಈ ಪ್ರದೇಶದ ಜನ ನಿರ್ಲಕ್ಷಿಸುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಬಂದಿದೆ.ರಾಪಿಡ್ ಟೆಸ್ಟ್ ನಲ್ಲಿ ಸೋಂಕು ಲಕ್ಷಣ ಕಂಡು ಬರುತ್ತಿದ್ದಂತೆಯೇ ಆ ವ್ಯಕ್ತಿಯನ್ನ ಆಸ್ಪತ್ರೆಗೆ ಸ್ಥಳಾಂತರಿಸುವ ಈ ಯೋಜನೆ ಸಕ್ಸಸ್ ಆಗುತ್ತದೆ ಎಂಬ ವಿಶ್ವಾಸ ಜಿಲ್ಲಾಡಳಿತಕ್ಕೆ ಬಂದಿದೆ.ಅನಕ್ಷರಸ್ತರೇ ಹೆಚ್ಚಾಗಿ ತುಂಬಿರುವ ಎನ್.ಆರ್.ಕ್ಷೇತ್ರದಲ್ಲಿ ಕೊರೊನಾ ಬಗ್ಗೆ ಸಂಪೂರ್ಣ ಜಾಗೃತಿ ಇಲ್ಲದ ಕಾರಣ ಅನಾಹುತಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ತಪಾಸಣೆ ನಡೆಸಲು ಸ್ಥಳೀಯರು ಸಹಕರಿಸುತ್ತಿಲ್ಲ ಎಂಬ ಆರೋಪಗಳೂ ಸಹ ಕೇಳಿ ಬಂದಿತ್ತು.ಈ ಹಿನ್ನಲೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರ ಜೊತೆ ಸಭೆ ನಡೆಸಿದ ಅಧಿಕಾರಿಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಪಿಡ್ ಟೆಸ್ಟ್ ಆರಂಭಿಸಿದ್ದಾರೆ.ಜಿಲ್ಲಾಡಳಿತದ ನಿರ್ಧಾರವನ್ನ ಸ್ಥಳೀಯರೂ ಸಹ ಸ್ವಾಗತಿಸಿದ್ದಾರೆ.
ಕೊರೊನಾ ಕಂಟ್ರೋಲ್ ಗೆ ವೈರಸ್ ಚೇಸಿಂಗ್ ಉತ್ತಮ ಕಾನ್ಸೆಪ್ಟ್. ರಾಪಿಡ್ ಟೆಸ್ಟ್ ಯೋಜನೆಗೆ ಸ್ಥಳೀಯರ ಬೆಂಬಲವೂ ಸಿಕ್ಕಿದೆ. ಜಿಲ್ಲಾಡಳಿತದ ಈ ನಿರ್ಧಾರ ಸ್ಥಳೀಯರಲ್ಲಿ ಕೊಂಚಮಟ್ಟಿಗೆ ಆತಂಕ ನಿವಾರಣೆಯಾಗಿದೆ…

RELATED ARTICLES

Related Articles

TRENDING ARTICLES