ಕೋಲಾರ : ಕೋಲಾರದ ಜಿಲ್ಲಾ ಎಸ್ಸೆನ್ನಾರ್ ಸರ್ಕಾರಿ ಆಸ್ಪತ್ರೆಯು ಇನ್ನು ಮುಂದೆ ಕೋವಿಡ್ ಆಸ್ಪತ್ರೆಯಾಗಿ ಬದಲಾಗಲಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಈ ಕ್ರಮವನ್ನು ಜರುಗಿಸಿದೆ. ಸಾಮಾನ್ಯ ರೋಗಿಗಳ ಚಿಕಿತ್ಸೆಗಾಗಿ ಬೃಹತ್ತಾದ ಖಾಸಗಿ ಆಸ್ಪತ್ರೆಯನ್ನು ಜಿಲ್ಲಾಡಳಿತವು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ.
ಕೋಲಾರ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಲಾಕ್ಡೌನ್ ತೆರವಾದ ನಂತ್ರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳ ಕೊರತೆಯು ಜಿಲ್ಲೆಯಲ್ಲಿ ಎದುರಾಗುತ್ತಿದೆ. ಇದ್ರಿಂದಾಗಿ ಕೋಲಾರದ ಸರ್ಕಾರಿ ಎಸ್ಸೆನ್ನಾರ್ ಆಸ್ಪತ್ರೆಯನ್ನು ಪೂರ್ಣಾವಧಿಗೆ ಕೋವಿಡ್ ರೋಗಿಗಳಿಗೆ ಮೀಸಲಿರಿಸಲು ಇದೀಗ ನಿರ್ಧರಿಸಲಾಗಿದೆ.
ಕೋಲಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆಗಾಗಿ ಎಲ್ಲ ಸೌಕರ್ಯವೂ ಇದೆ. ಆದ್ರೆ. ಈ ಮಧ್ಯೆ, ಕೊರೋನಾ ಸೋಂಕಿತರ ದಾಖಲಾತಿಯು ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ಹೆಚ್ಚಾಗಿರೋದ್ರಿಂದ ಇಲ್ಲಿ ಸ್ಥಳಾವಕಾಶದ ಸಮಸ್ಯೆಯು ಎದುರಾಗಿದೆ. ಇದನ್ನು ಮನಗಂಡ ಜಿಲ್ಲಾಡಳಿತವು ಎಸ್ಸೆನ್ನಾರ್ ಆಸ್ಪತ್ರೆಗೆ ಬರುವ ರೋಗಿಗಳ ಚಿಕಿತ್ಸೆಗಾಗಿ ಪಕ್ಕದ ಈಟಿಸಿಎಂ ಆಸ್ಪತ್ರೆಯನ್ನು ಸಜ್ಜುಗೊಳಿಸಿದೆ. ಇದ್ರಿಂದಾಗಿ ಪ್ರಸ್ತುತ ಕೋವಿಡ್ ಪೀಡಿತರಿಗಾಗಿ ಇದ್ದ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮಾರ್ಥ್ಯವು ಹೆಚ್ಚಾಗಿದೆ.
ಕೊರೋನಾ ರೋಗಿಗಳಿಗಾಗಿ ಎಸ್ಸೆನ್ನಾರ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮೀಸಲಿರಿಸಿರೋದ್ರಿಂದ ಎಲ್ಲ ರೀತಿಯ ಚಿಕಿತ್ಸೆಗೆ ಅನುಕೂಲವಾಗಲಿದೆ. ಎಂದಿನಂತೆ ಎಸ್ಸೆನ್ನಾರ್ ಆಸ್ಪತ್ರೆಗೆ ಬರುವ ಸಾಮಾನ್ಯ ಬಡ ರೋಗಿಗಳು ಮುಂದಿನ ವಾರದಿಂದ ಈಟಿಸಿಎಂ ಆಸ್ಪತ್ರೆಗೆ ಬರುವಂತೆ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ಒಟ್ನಲ್ಲಿ, ಕೋವಿಡ್ ಕಾಯಿಲೆಯ ಎಲ್ಲ ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗಾಗಿ ಎಸ್ಸೆನ್ನಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಅವಕಾಶ ಮಾಡಿರುವ ಜಿಲ್ಲಾಡಳಿತದ ನಿರ್ಧಾರವು ಶ್ಲಾಘನೀಯವಾಗಿದೆ. ಇದ್ರಿಂದಾಗಿ ಒಂದೇ ಆವರಣದಲ್ಲಿ ಸೋಂಕಿನ ಬಗ್ಗೆ ಸಾಮಾನ್ಯ ರೋಗಿಗಳಿಗೆ ಇದ್ದ ಆತಂಕವು ನಿವಾರಣೆಯಾದಂತಾಗಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.