ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಕೊರೊನಾ ಮಧ್ಯೆಯೂ ಗೋ ಕಳ್ಳರ ಅಟ್ಟಹಾಸ ಮೇರೆ ಮೀರಿದೆ. ಬೀದಿಬದಿ ಇರುವ ಹಸುಗಳನ್ನ ರಾತ್ರಿಯಾಗುತ್ತಿದ್ದಂತೆ ಹೊತ್ತೊಯ್ಯುವ ತಂಡವೊಂದು ಸಕ್ರಿಯವಾಗಿದ್ದು, ಕರಾವಳಿಯ ಗೋ ಸಾಕಾಣಿಕೆದಾರರಲ್ಲಿ ಆತಂಕ ಮನೆ ಮಾಡಿದೆ. ಜುಲೈ 9ರ ರಾತ್ರಿ 10.24 ಸಮಯಕ್ಕೆ ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ಇಂತಹದ್ದೇ ಒಂದು ಗೋ ಕಳ್ಳತನ ಕೃತ್ಯ ನಡೆದಿದ್ದು, ಕಳ್ಳತನದ ದೃಶ್ಯ ಮೂರುಕಾವೇರಿಯಲ್ಲಿರುವ ಮಹಮ್ಮಾಯಿ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾರದ ಹಿಂದೆ ನಡೆದ ಈ ಕೃತ್ಯವು ಕೊರೋನಾ ಅನ್ ಲಾಕ್ ನಿಂದಾಗಿ ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಆದರೆ ಕೃತ್ಯ ನಡೆದ ದಿವಸವೇ ಕಾರಿನ ಓಡಾಟದ ಬಗ್ಗೆ ಸಂಶಯಗೊಂಡಿದ್ದ ದೇವಾಲಯದ ಸಿಬ್ಬಂದಿಯೊಬ್ಬರು, ಜುಲೈ 16 ರ ಗುರುವಾರ ಆಡಳಿತ ಸಮಿತಿಯ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ. ಇಷ್ಟಾಗುತ್ತಲೇ ಸಿಸಿಟಿವಿಯ ದೃಶ್ಯ ಪರಿಶೀಲಿಸಿದವರಿಗೆ ಅಚ್ಚರಿ ಕಾದಿದೆ. ದೇವಾಲಯದ ಮುಂಭಾಗದಲ್ಲಿ ತನ್ನ ಪಾಡಿಗೆ ತಾನಿದ್ದ ಗೋವಿನ ಹಿಂಡಿನಿಂದ ಆಕಳು ಒಂದನ್ನ ಗೋ ಕಳ್ಳರ ತಂಡ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡಿರುವ ಸ್ಥಳೀಯರು ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ. ಇನ್ನು ಸೆರೆಯಾದ ದೃಶ್ಯದಲ್ಲಿ ಗೋ ಕಳ್ಳರ ತಂಡವು ಕೇವಲ ಒಂದು ನಿಮಿಷದಲ್ಲಿ ಹಸುವೊಂದನ್ನ ಹಿಂಸಾತ್ಮಕ ರೀತಿಯಲ್ಲಿ ಹೊತ್ತೊಯ್ದಿರುವುದು ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೃತ್ಯದಲ್ಲಿ ನಾಲ್ಕು ಜನರಿರುವುದು ಕಂಡು ಬಂದಿದೆ.
ಇನ್ನು ಸಿಸಿಟಿವಿಯಲ್ಲಿ ದಾಖಲಾಗಿರುವಂತೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ಗೋ ಕಳ್ಳರ ತಂಡವೊಂದು ನಾಲ್ಕೈದು ಸಂಖ್ಯೆಯಲ್ಲಿದ್ದ ಗೋವುಗಳ ಸಮೀಪವೇ ಕಾರು ತಂದು ನಿಲ್ಲಿಸುತ್ತೆ. ಕಾರಿನಲ್ಲಿ ಇಳಿಯುವ ಇಬ್ಬರು ಮುಸುಕುಧಾರಿ ಯುವಕರಲ್ಲಿ ಒಬ್ಬಾತ ಹಸುವೊಂದಕ್ಕೆ ತಿನ್ನಲು ಏನನ್ನೋ ನೀಡುತ್ತಾನೆ. ಮಾತ್ರವಲ್ಲದೇ ಕ್ಷಣ ಮಾತ್ರದಲ್ಲೇ ಅದರ ಕೊಂಬನ್ನ ಹಿಡಿದು ನಿಯಂತ್ರಣಕ್ಕೆ ಪಡೆದವನೇ, ತನ್ನ ಸಹಚರನ ಸಹಾಯ ಪಡೆದು ದನದ ಕುತ್ತಿಗೆಗೆ ಹಗ್ಗ ಬಿಗಿದು, ಚಾಲನೆಯಲ್ಲಿದ್ದ ಕಾರಿನ ಹಿಂಬದಿ ಸೀಟಿಗೆ ತಳ್ಳುತ್ತಾರೆ. ಇದೆಲ್ಲವನ್ನ ನಡೆಸಲು ಕಳ್ಳರ ತಂಡಕ್ಕೆ ಕೇವಲ ಒಂದು ನಿಮಿಷವಷ್ಟೇ ಸಾಕಾಗಿತ್ತು. ಆ ನಂತರ ಆ ಕಾರು ಮೂಡಬಿದ್ರಿ ರಸ್ತೆಯಾಗಿ ಸಂಚರಿಸಿದೆ. ಇಷ್ಟಾಗುತ್ತಲೇ ದೇವಾಲಯದ ಸಿಬ್ಬಂದಿ ಟಾರ್ಚ್ ಹಿಡಿದುಕೊಂಡು ಬಂದಿದ್ದರಾದರೂ, ಕಾರು ನಿಂತಿದ್ದೇಕೆ..? ವೇಗವಾಗಿ ಹೊರಟಿದ್ದೇಕೆ? ಅನ್ನೋದಾಗಿ ಗೊತ್ತಾಗಿರಲಿಲ್ಲ. ಆದರೆ ಇದೀಗ ವಾರದ ಬಳಿಕ ಈ ಘಟನೆ ಸಾರ್ವಜನಿಕರಿಗೆ ತಿಳಿಯುವಂತಾಗಿದೆ. ಇದರಿಂದಾಗಿ ತಕ್ಷಣವೇ ಆರೋಪಿಗಳ ವಿರುದ್ಧ ಕ್ರಮಕ್ಕಾಗಿ ಸ್ಥಳೀಯರು ಪೊಲೀಸರನ್ನ ಒತ್ತಾಯಿಸಿದ್ದಾರೆ. ಕದ್ದೊಯ್ದ ಜಾನುವಾರು ಸ್ಥಳೀಯ ಹೈನುಗಾರಿಕೆ ನಡೆಸುತ್ತಿರುವ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ.