ಮಂಗಳೂರು: ದ.ಕ. ಜಿಲ್ಲೆಯಲ್ಲಿ ದಾಖಲೆಯ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಶುಕ್ರವಾರ ಒಂದೇ ದಿನ 311 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳವಾಗಿದ್ದು 3074ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಮತ್ತೆ 8 ಮಂದಿಯ ಬಲಿ
ದ.ಕ.ಜಿಲ್ಲೆಯಲ್ಲಿ ದಾಖಲೆಯ ಕೊರೊನಾ ಮಹಾಸ್ಫೋಟದ ಪರಿಣಾಮ ಮತ್ತೆ ಎಂಟು ಮಂದಿ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಸೋಂಕು ಪೀಡಿತರ ಸಾವು ಜಾಸ್ತಿಯಾಗುತ್ತಲೇ ಇದ್ದು, ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 71 ಕ್ಕೆ ಏರಿಕೆಯಾಗಿದೆ.
ಅಲ್ಲದೆ, ದ.ಕ ಜಿಲ್ಲೆಯಲ್ಲಿ ಇದುವರೆಗೆ ವಿವಿಧ ಜಿಲ್ಲೆಗಳಿಂದ ಬಂದು ಇಲ್ಲಿನ ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಈ ವರೆಗೆ 12 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 4 ಮಂದಿ, ಚಿಕ್ಕಮಗಳೂರಿನ ಇಬ್ಬರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ರಾಮನಗರ, ಸಕಲೇಶಪುರ, ಚೆನ್ನಗಿರಿ, ಕುಂದಾಪುರ ಹಾಗೂ ಮಡಿಕೇರಿಯ ತಲಾ ಓರ್ವರು ಮೃತಪಟ್ಟಿದ್ದಾರೆ.
ಜಿಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಪೈಕಿ ಶೇ.50 ಮಂದಿಗೆ ಕೋವಿಡ್-19ನ ಲಕ್ಷಣಗಳೇ ಇಲ್ಲದವರಾಗಿದ್ದಾರೆ ಎನ್ನುವ ಅಂಶ ಇಲಾಖೆಯ ಆತಂಕಕ್ಕೂ ಕಾರಣವಾಗಿದೆ.
ಆದ್ದರಿಂದ ಸರಕಾರದ ಆದೇಶದಂತೆ ಸೋಂಕಿತರು ಮನೆಯಲ್ಲಿಯೇ ಕ್ವಾರಂಟೈನ್ ಮಾಡುವ ಮೂಲಕ ಚಿಕಿತ್ಸೆ ನೀಡಲು ಮುಂದಾಗಿದೆ. ಇದಕ್ಕಾಗಿ ಮಂಗಳೂರು ನಗರ ಪಾಲಿಕೆಯ ‘ಕಮಾಂಡ್ ಕಂಟ್ರೋಲ್ ಸೆಂಟರ್’ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವೀಡಿಯೋ ಕಾಲ್ ಮತ್ತು ದೂರವಾಣಿಯ ಮೂಲಕ ಸಂಪರ್ಕಿಸಿ ಸ್ಥಳೀಯ ವೈದ್ಯರಿಂದ ತಪಾಸಣೆ ನಡೆಸಲಾಗುವುದು. ಅಲ್ಲದೆ, ಶೀಘ್ರದಲ್ಲೇ ಪಿಆರ್‌ಜಿ ಸೆಲ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.