ಶಿವಮೊಗ್ಗ : ಎಸ್.ಎಸ್.ಎಲ್.ಸಿ. ಪರೀಕ್ಷೆ ಉತ್ತರ ಪರೀಕ್ಷೆ ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕನೊಬ್ಬ ಹಠಾತ್ತನೇ ಕುಸಿದು ಬಿದ್ದು ಸಾವನಪ್ಪಿರುವ ಘಟನೆ ಇಂದು ಶಿವಮೊಗ್ಗದಲ್ಲಿ ನಡೆದಿದೆ. ಇಂದು ನಗರದ ಎನ್.ಇ.ಎಸ್. ಕಾಲೇಜಿನಲ್ಲಿ ನಡೆಯುತ್ತಿದ್ದ ಮೌಲ್ಯಮಾಪನದ ಬಳಿಕ ಮಧ್ಯಾಹ್ನ ಊಟಕ್ಕೆಂದು ಹೊರಡಲು ಸಿದ್ಧವಾಗುತ್ತಿದ್ದ ವೇಳೆಯೇ, ಶಿಕ್ಷಕ ಕುಸಿದು ಬಿದ್ದಿದ್ದಾರೆ. 48 ವರ್ಷದ ಕುಮಾರ್ ಭದ್ರಾವತಿಯ ನ್ಯೂಟೌನ್ ವ್ಯಾಪ್ತಿಯ ಜನ್ನಾಪುರ ಬಡಾವಣೆಯಲ್ಲಿರುವ ಸತ್ಯ ಸಾಯಿ ಶಿಕ್ಷಣ ಸಂಸ್ಥೆಯ ಈಶ್ವರಪ್ಪ ಅನುದಾನ ರಹಿತ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಶಿಕ್ಷಕರಾಗಿದ್ದ ಕುಮಾರ್, ಇಂದು ಎನ್.ಇ.ಎಸ್. ಕಾಲೇಜಿನಲ್ಲಿ ನಡೆಸಲಾಗುತ್ತಿದ್ದ ಸಮಾಜ ವಿಜ್ಞಾನ ವಿಷಯದ ಪತ್ರಿಕೆಗಳ ಮೌಲ್ಯಮಾಪನ ನಡೆಸುತ್ತಿದ್ದರು ಎನ್ನಲಾಗಿದೆ. ಹಠಾತ್ತನೆ ಕುಸಿದು ಬಿದ್ದ ತಕ್ಷಣವೇ, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ಮಾರ್ಗಮಧ್ಯೆಯೆ ಶಿಕ್ಷಕ ಕುಮಾರ್ ಮೃತಪಟ್ಟಿದ್ದಾರೆ. ನಂತರ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಸ್ಥಳಕ್ಕೆ ಡಿಡಿಪಿಐ ರಮೇಶ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೌಲ್ಯಮಾಪನಕ್ಕೆ ಹಾಜರಾದ ಶಿಕ್ಷಕರು ಸೇರಿದಂತೆ, ಡಿಡಿಪಿಐ ರಮೇಶ್ ಮತ್ತು ಅಧಿಕಾರಿಗಳು ಅಗಲಿದ ಶಿಕ್ಷಕ ಕುಮಾರ್ ಸಾವಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ನೆರವೇರಿಸಿದ್ದಾರೆ. ಈ ಘಟನೆ ಬಳಿಕ ಮೌಲ್ಯಮಾಪನ ಕೇಂದ್ರದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.