ಶಿವಮೊಗ್ಗ : ಜಿಲ್ಲೆಯೆಲ್ಲೆಡೆ ಹಾಫ್ ಲಾಕ್ ಡೌನ್ ಘೋಷಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಕೊರೋನಾ ನಿಯಂತ್ರಣದ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜುಲೈ 16 ರಿಂದ ಮುಂದಿನ ಆದೇಶದವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ಜಿಲ್ಲಾಡಳಿತ ಈ ತೀರ್ಮಾನ ತೆಗೆದುಕೊಂಡಿದೆ. ಪೆಟ್ರೋಲ್ ಬಂಕ್‍ಗಳು, ಮದ್ಯದ ಅಂಗಡಿಗಳು, ಕಚೇರಿಗಳು ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನ 2 ಗಂಟೆವರೆಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಕೈಗಾರಿಕಾ ಚಟುವಟಿಕೆಗಳಿಗೆ ಸಮಯ ನಿರ್ಬಂಧ ವಿಧಿಸಿರುವುದಿಲ್ಲ. ಆದರೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರಬೇಕು. ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಒದಗಿಸುವುದು ಮಾಲಿಕರ ಜವಾಬ್ದಾರಿಯಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಿಸಲು ಅವಕಾಶವಿರುವುದಿಲ್ಲ. ಎಲ್ಲಾ ಹಬ್ಬಗಳನ್ನು ಮನೆಗಳಲ್ಲಿಯೇ ಆಚರಿಸಬಹುದಾಗಿದೆ. ಮದುವೆ, ಅಂತ್ಯಸಂಸ್ಕಾರ ಚಟುವಟಿಕೆಗಳಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಮಾನದಂಡವನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಸೂಚಿಸಲಾಗಿದೆ. ಇನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪುಗೂಡುವುದು, ಮಾಸ್ಕ್ ಧರಿಸದೇ ಇರುವುದು ಸೇರಿದಂತೆ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸಭೆಯಲ್ಲಿ ಸೂಚಿಸಲಾಯಿತು.
ಈ ಸಮಾಲೋಚನಾ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್, ಲಾರಿ ಮಾಲಿಕರ ಸಂಘ, ಆಟೋ ಕಾಂಪ್ಲೆಕ್ಸ್ ಸಂಘ, ಸಗಟು ತರಕಾರಿ ವ್ಯಾಪಾರಿಗಳ ಸಂಘ, ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸಂಘ, ವಿಶ್ವೇಶ್ವರಯ್ಯ ಸಣ್ಣ ಕೈಗಾರಿಕೆಗಳ ಸಂಘ, ಬಸ್ ಮಾಲಿಕರ ಸಂಘ, ಜವಳಿ ವರ್ತಕರ ಸಂಘ, ರಿಕ್ಷಾ ಚಾಲಕರ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ರು.