ಉಡುಪಿ : ಸಾಂಕ್ರಾಮಿಕ ರೋಗ ಕೊರೋನಾ ಜಿಲ್ಲೆಯಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಉಡುಪಿ ಗಡಿಗಳನ್ನು ಸೀಲ್ ಮಾಡುವ ನಿರ್ಧಾರಕ್ಕೆ ಜಿಲ್ಲಾಢಳಿತ ಬಂದಿದೆ. ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಿ, ಒಳಗೆ ಮತ್ತು ಹೊರಗೆ ಹೋಗುವವರ ಮೇಲೆ ನಿಗಾವಹಿಸಿದರೆ ಕೊರೋನಾ ನಿಯಂತ್ರಣ ಸಾಧ್ಯವಿದೆ ಎನ್ನುವ ಸಲಹೆ ನೀಡಿದ್ದರು. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಂ ಆದೇಶ ನೀಡಿದ್ದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಲಾಕ್ ಡೌನ್ ಬದಲಿಗೆ, ಹದಿನಾಲ್ಕು ದಿನಗಳ ವರೆಗೆ ಗಡಿಗಳು ಸೀಲ್ ಡೌನ್ ಮಾಡುವ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಗಡಿಗಳು ಸೀಲ್ ಡೌನ್ ಆಗಲಿದ್ದು, ಜಿಲ್ಲೆಯಿಂದ ಹೊರಗೆ ಹಾಗೂ ಒಳಗೆ ಬರಲು ನಾಳೆ ಅಂದರೆ ಬುಧವಾರ 8 ಗಂಟೆವರೆಗೆ ಅವಕಾಶ ನೀಡಲಾಗಿದೆ. ರಾತ್ರಿ ಸರ್ಕಾರದ ಅದೇಶದಂತೆ ಸಂಡೇ ಲಾಕ್ ಡೌನ್ ಮುಂದುವರಿಯಲಿದೆ. ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕುಂದಾಪುರ ಶಾಸಕ ಶ್ರೀನಿವಾಸ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಲ್ಹೋತ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಸಹಾಯಕ ಆಯುಕ್ತರಾದ ಕೆ. ರಾಜು, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್, ಜಿಲ್ಲಾ ಸರ್ಜನ್ ಮಧುಸೂದನ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.