ಮಂಗಳೂರು :ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಉಡುಪಿ ಜೊತೆಗೆ ಪ್ರಥಮ ಸ್ಥಾನ ಹಂಚಿಕೊಂಡು ಕರಾವಳಿಯ ಹಿರಿಮೆ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 34,287 ವಿದ್ಯಾರ್ಥಿಗಳಲ್ಲಿ 29,494 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಶೇಕಡಾ 64.92 , ವಾಣಿಜ್ಯ ವಿಭಾಗದಲ್ಲಿ 85.48% ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 93.69 ರಷ್ಟು ದಾಖಲೆಯ ಫಲಿತಾಂಶವನ್ನ ದಕ್ಷಿಣ ಕನ್ನಡ ಜಿಲ್ಲೆ ದಾಖಲಿಸಿದೆ. ಇನ್ನು ಜಿಲ್ಲೆಯಲ್ಲೂ ಬಾಲಕಿಯರದ್ದೇ ಸಾಧನೆ ಮೇಲು ಗೈ ಎನಿಸಿಕೊಂಡಿದ್ದು, ಪರೀಕ್ಷೆ ಹಾಜರಾದ 17,189 ಬಾಲಕಿಯರಲ್ಲಿ 90.53% ಉತ್ತೀರ್ಣರಾಗಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಗಮನಸೆಳೆದಿದ್ದಾರೆ.
ಮಂಗಳೂರು ನಗರದ ಬಾಸ್ಕೋಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೃಥ್ವಿ ಜೆಕೆ ಶೇಕಡಾ 98.66 ಅಂಕಗಳೊಂದಿಗೆ ಉತ್ತೀರ್ಣರಾಗಿ ಜಿಲ್ಲೆಯಲ್ಲಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ. ಇವರು ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸಕರಾದ ಪ್ರೊ. ಜೆ. ಕೇಶವಯ್ಯ ಹಾಗೂ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿ ಆಗಿರುವ ಶೈಲಜಾ ದಂಪತಿಯ ಪುತ್ರಿಯಾಗಿದ್ದಾರೆ. ವೈದ್ಯ ವೃತ್ತಿಯನ್ನ ಆಯ್ಕೆ ಮಾಡುವುದು ತನ್ನ ಕನಸಾಗಿದೆ ಅಂತಾ ಅವರು ತಿಳಿಸಿದ್ದಾರೆ.
ಪೃಥ್ವಿ ಜೆಕೆ ಅವರ ಅಂಕಗಳ ವಿವರ :
ಇಂಗ್ಲೀಷ್ – 93, ಸಂಸ್ಕೃತ – 100, ಫಿಸಿಕ್ಸ್ – 100, ಕೆಮೆಸ್ಟ್ರಿ – 100, ಗಣಿತ – 100 ಹಾಗೂ ಜೀವಶಾಸ್ತ್ರದಲ್ಲಿ 99 ಅಂಕ ಗಳಿಸಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಅಪೂರ್ವ ಎಂ. ಕೂಡಾ ಮಂಗಳೂರಿನ ವಿಕಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಮೋಹನ್ ಪೂಜಾರಿ ಹಾಗೂ ಪ್ರತಿಮಾ ಮೋಹನ್ ದಂಪತಿಯ ಪುತ್ರಿಯಾಗಿದ್ದಾರೆ. ಇವರು 594 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಇಂಗ್ಲೀಷ್ ನಲ್ಲಿ 95 ಹಾಗೂ ಹಿಂದಿಯಲ್ಲಿ 99 ಅಂಕ ಪಡೆದಿದ್ದರೆ, ಉಳಿದಂತೆ ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್ ಹಾಗೂ ಬೇಸಿಕ್ ಮ್ಯಾಥ್ಸ್ ವಿಷಯಗಳಲ್ಲಿ 100 ಅಂಕಗಳನ್ನ ಗಳಿಸಿ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲಿಯೇ ವಿಶಿಷ್ಟ ಸಾಧನೆ ಮೆರೆದಿದ್ದಾರೆ.