ಶಿವಮೊಗ್ಗ : ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲೀಗ, ಖುದ್ದು ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನಗರದ ನಾಗರೀಕರಿಗೆ ಆಯುರ್ವೇದ ಬೂಸ್ಟರ್ ಕಿಟ್ ನೀಡಲು ನಿರ್ಧರಿಸಿದ್ದಾರೆ. ಇದನ್ನು ಸರ್ಕಾರದಿಂದ ನೀಡದೇ, ಖಾಸಗಿ ಟ್ರಸ್ಟ್ ವೊಂದನ್ನು ಸ್ಥಾಪಿಸಿ ನೀಡಲು ನಿರ್ಧರಿಸಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಕಿಟ್ ಗಳನ್ನು ತರಿಸಿಕೊಳ್ಳಲು ಯೋಜಿಸಿದ್ದಾರೆ. ಈಗಾಗಲೆ, 1 ಲಕ್ಷ ಕಿಟ್ ತರಿಸಿದ್ದು, ಮೊದಲ ಹಂತವಾಗಿ, ಅಗತ್ಯ ಇರುವವರಿಗೆ ನೀಡಲು ನಿರ್ಧರಿಸಿದ್ದಾರೆ. ಅಂದರೆ, ಮನೆಯಲ್ಲಿ ವಯಸ್ಸಾದವರು ಹೆಚ್ಚಿರುವ ಮನೆಗಳಿಗೆ ನೀಡಲು, ನಿರ್ಧಾರ ಮಾಡಿದ್ದಾರೆ. ಈ ಸಂಬಂಧ ನಿನ್ನೆ ರಾತ್ರಿ, ವಿವಿಧ ಉದ್ಯಮಿಗಳು ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಸಿರುವ ಅವರು, ಈ ಆಯುರ್ವೇದದ ಬೂಸ್ಟರ್ ಕಿಟ್ ಮೂಲಕ ನಗರದ ನಾಗರೀಕರಿಗೆ ಈ ಸಂಕಷ್ಟದ ಸಮಯದಲ್ಲಿ ನೆರವಾಗಲು ನಿಂತಿದ್ದಾರೆ. ಸಮಾಜದ ಋಣ ತೀರಿಸುವ ಸಂದರ್ಭ ಇದಾಗಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಜನರ ಪರವಾಗಿ ನಾವು ನಿಲ್ಲಬೇಕೆಂದು ತೀರ್ಮಾನಿಸಿಕೊಂಡಿರುವ ಸಚಿವ ಈಶ್ವರಪ್ಪ, ಈ ಬೂಸ್ಟರ್ ಕಿಟ್ ಹಂಚಿಕೆಯಲ್ಲಿ ಯಾವುದೇ ಲೋಪವಾಗದಂತೆ, ಪ್ರತಿಯೊಬ್ಬ ವ್ಯಕ್ತಿಗೂ ತಲುಪಬೇಕೆಂದು ಯೋಜಿಸಿದ್ದಾರೆ. ಕೊರೋನಾ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ, ನಗರದ ಉದ್ಯಮಿಗಳ ನೆರವಿನ ಮೂಲಕ ಸುಮಾರು 5 ಲಕ್ಷಕ್ಕೂ ಹೆಚ್ಚು ನಾಗರೀಕರಿಗೆ ಈ ಬೂಸ್ಟರ್ ಕಿಟ್ ನೀಡಲು ಇದೀಗ ಸಚಿವ ಕೆ.ಎಸ್. ಈಶ್ವರಪ್ಪ ನಿರ್ಧಾರ ಮಾಡಿದ್ದು, ಇದು ಮಾದರಿಯಾಗಿದೆ.