ಮಂಗಳೂರು : ಕಡಲನಗರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಅರ್ಧ ಶತಕಕ್ಕೆ ಏರಿದೆ. ಇಂದು ನಾಲ್ವರು ವೃದ್ಧರು ಬಲಿಯಾಗಿದ್ದು, ಸಾವಿನ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. ನಿನ್ನೆ ಐವರು ಸಾವನ್ನಪ್ಪಿದ ಪರಿಣಾಮ 46 ಕ್ಕೆ ಏರಿಕೆಯಾಗಿದ್ದ ಸಾವು ಪ್ರಕರಣ ಇಂದು 50 ತಲುಪಿದೆ. ಕಳೆದ ಒಂದು ವಾರದಿಂದ ನಿರಂತರ ಸಾವು ಪ್ರಕರಣಗಳು ಸಂಭವಿಸುತ್ತಲೇ ಇದ್ದು, ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ. ಇನ್ನು ಇಂದು ಮತ್ತೆ 131 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಇದುವರೆಗೆ 2,361 ತಲುಪಿದಂತಾಗಿದ್ದು, ಅದರಲ್ಲಿ 1,467 ಪ್ರಕರಣಗಳು ಸಕ್ರಿಯವಾಗಿದ್ದು, ಸೋಂಕಿತರು ಮಂಗಳೂರು ನಗರದ ವಿವಿಧ ಖಾಸಗಿ ಹಾಗೂ ಸರಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 844 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಕೂಡಾ ಆಗಿದ್ದಾರೆ. ಇನ್ನು ಸೋಂಕು ಹೆಚ್ಚಳವಾಗುತ್ತಿರುವುದನ್ನ ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಿಎಂ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ, ಜುಲೈ 16 ರಿಂದ ಒಂದು ವಾರ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿ ಆದೇಶಿಸಿದೆ. ಒಟ್ಟಿನಲ್ಲಿ ಕೊರೊನಾ ಸೋಂಕಿನಿಂದ ಕರಾವಳಿಯ ಜನತೆ ಬೆಚ್ಚಿಬಿದ್ದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.