ಮೈಸೂರು : ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಅಧಿದೇವತೆಯ ಉತ್ಸವ ನೆರವೇರಿತು.ಕೊರೊನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದಿನ ಆಚರಣೆ ಕೇವಲ ಸಾಂಪ್ರದಾಯವಾಗಿ ಮಾತ್ರ ನೆರವೇರಿತು.ಆಷಾಢ ಕೃಷ್ಣಪಕ್ಷ ರೇವತಿ ನಕ್ಷತ್ರದ ಶುಭ ಗಳಿಗೆಯಲ್ಲಿ ನಾಡದೇವಿಯ ಉತ್ಸವ ನೆರವೇರಿತು.ಪ್ರತಿವರ್ಷ ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನಳಾಗಿ ಅದ್ದೂರಿಯಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದ ಉತ್ಸವ ಇಂದು ಕೇವಲ ದೇವಾಲಯದ ಆವರಣದಲ್ಲಿ ಮಾತ್ರ ಸಾಗಿತು.ಯದುವಂಶದ ಅರಸರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ದಂಪತಿ ಸಮೇತ ಆಗಮಿಸಿ ಉತ್ಸವಕ್ಕೆ ಚಾಲನೆ ನೀಡಿದರು.ಹಸಿರು ಬಣ್ಣದ ಪೇಟಾ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಪತ್ನಿ ತ್ರಿಷಿಕಾ ಒಡೆಯರ್ ಸಮೇತ ಆಗಮಿಸಿದ ಯದುವೀರ್ ನಾಡದೇವಿಯ ದರುಶನ ಪಡೆದು ನಂತರ ಉತ್ಸವಕ್ಕೆ ಚಾಲನೆ ನೀಡಿದರು.ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿಗೆ ಇಂದು ಬೆಳಿಗ್ಗೆ ಅಭಿಷೇಕದ ನಂತರ ವಿಶೇಷ ಪೂಜೆಗಳು ನೆರವೇರಿತು.ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ಧೀಕ್ಷಿತ್ ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು.ಬೆಳಿಗ್ಗೆ ೯ ಗಂಟೆಗೆ ಅಮ್ಮನವರ ಉತ್ಸವ ಆರಂಭವಾಯಿತು.ಒಂದು ಪ್ರದಕ್ಷಿಣೆ ನಂತರ ಉತ್ಸವ ಕಾರ್ಯಕ್ರಮ ಮುಕ್ತಾಯವಾಯಿತು.ಕೊರೊನಾ ಹಿನ್ನಲೆ ಸಾರ್ವಜನಿಕರಿಗೆ ಪ್ರವೇಶ ನಿರ್ಭಂಧಿಸಲಾಗಿತ್ತು.ಚಾಮುಂಡಿಬೆಟ್ಟಕ್ಕೆ ತೆರಳುವ ಎಲ್ಲಾ ಮಾರ್ಗಗಳಿಗೂ ಬ್ಯಾರಿಕೇಡ್ ಅಳವಡಿಸಿ ಭಕ್ತರ ಪ್ರವೇಶಕ್ಕೆ ಕಡಿವಾಣ ಹಾಕಲಾಗಿತ್ತು.ಒಟ್ಟಾರೆ ವರ್ಧಂತಿ ದಿನ ಭಕ್ತರಿಂದ ತುಂಬಿ ತುಳುಕುತ್ತಿದ್ದ ಚಾಮುಂಡಿಬೆಟ್ಟ ಇಂದು ಖಾಲಿ ಖಾಲಿ.ಆಷಾಢ ಮಾಸದ ಕೊನೆ ಮಂಗಳವಾರವಾದ ನಾಳೆಯೂ ಸಹ ಚಾಮುಂಡಿಬೆಟ್ಟ ಪ್ರವೇಶ ನಿರ್ಭಧಿಸಲಾಗಿದೆ…