ಶಿವಮೊಗ್ಗ : ಮಲೆನಾಡು ಜಿಲ್ಲೆ ಶಿವಮೊಗ್ಗದ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಕಳೆದ ಒಂದು ವಾರದಿಂದ ಮಲೆನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ, ಪ್ರಸಿದ್ದ ಜಲಪಾತಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಜಲಪಾತದಲ್ಲಿ ರಾಜಾ, ರಾಣಿ, ರೋರರ್, ರಾಕೆಟ್ ಈ ನಾಲ್ಕು ಕವಲುಗಳಾಗಿ ಹಾಲ್ನೊರೆಯಂತೆ ಧುಮ್ಮಿಕ್ಕಿ ಕಣ್ಮನ ಸೆಳೆಯುತ್ತಿದೆ.
ಇನ್ನು ಮಳೆಗಾಲದ ಸಮಯದಲ್ಲಿ ನಯನ ಮನೋಹರವಾಗಿ ಕಂಗೊಳಿಸುವ ಜೋಗದ ವೈಭವವನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಸೇರಿದಂತೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡುತ್ತಿದ್ದರು. ಅತಿ ಎತ್ತರದ ಜಲಪಾತ ಎಂದೇ ಖ್ಯಾತಿ ಪಡೆದಿರುವ ಜಲಪಾತದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ವೈರಸ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರ ಪ್ರವಾಸಿ ತಾಣಗಳಿಗೂ ನಿರ್ಬಂಧ ವಿಧಿಸಿದೆ. ಹೀಗಾಗಿ ರಮಣೀಯವಾದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಲ್ಲದೇ ಜೋಗದ ಗುಂಡಿ ಭಣಭಣ ಎನ್ನುತ್ತಿದೆ. ಆದರೆ, ಪ್ರವಾಸಿಗರಿರಲೀ ಬಿಡಲೀ, ನಿಸರ್ಗದ ಮಡಿಲಲ್ಲಿ ಜೋಗದ ಸೌಂದರ್ಯ ಇಮ್ಮಡಿಗೊಂಡು ನಳನಳಿಸುತ್ತಿದೆ.