ಉಡುಪಿ : ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಗ್ಗು ಪದೇಶದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಮಳೆಯ ಅರ್ಭಟಕ್ಕೆ ವ್ಯಕ್ತಿಯೋರ್ವರು ಹರಿಯುವ ನದಿಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಕಂಠಗದ್ದೆ ಎಂಬಲ್ಲಿ ಘಟನೆ ನಡೆದಿದ್ದು, ವಿಠಲ ಗೊಲ್ಲ (42) ಮೃತಪಟ್ಟವರು. ಅವರು ಮನೆ ಸಮೀಪದಲ್ಲಿ ಹರಿಯುವ ಹೊಳೆ ಬದಿಗೆ ಮೂತ್ರ ವಿಸರ್ಜನೆಗೆ ಹೋಗಿದ್ದರು. ಕಲ್ಲಿನ ಮೇಲೆ ಕಾಲು ಇಟ್ಟಾಗ ಮಣ್ಣು ಸಡಿಲಗೊಂಡಿದ್ದ ಹಿನ್ನಲೆಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ವಿಠಲ ಗೊಲ್ಲ ಕೊಚ್ಚಿಕೊಂಡು ಹೋಗಿದ್ದರು. ಸಾಕಷ್ಟು ಹುಡುಕಾಡಿದರೂ ಕೂಡ ವಿಠಲ ಗೊಲ್ಲ ಪತ್ತೆಯಾಗಿರಲಿಲ್ಲ. ಇಂದು ವಿಠಲ ಗೊಲ್ಲರ ಶವ ಪತ್ತೆಯಾಗಿದ್ದು ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.