ಶಿವಮೊಗ್ಗ : ತೈಲ ಬೆಲೆ ಏರಿಕೆ ಖಂಡಿಸಿ, ಇಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸೈಕಲ್ ತುಳಿದು ಪ್ರತಿಭಟನೆ ನಡೆಸಿದ್ದಾರೆ. ಹೊಸನಗರದ ಮುಖ್ಯ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಸೈಕಲ್ ತುಳಿದು ಪ್ರತಿಭಟಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ, ಜನರ ಜೊತೆಗಿರಬೇಕಾದ ಸರ್ಕಾರ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ, ಇನ್ನಷ್ಟು ಸಂಕಷ್ಟಕ್ಕೆ ತಳ್ಳುವಂತಹ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ. ಅದರಲ್ಲೂ ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸೇಲ್ ಬೆಲೆ ಏರಿಕೆ ಕಾಣುತ್ತಿದ್ದು, ಸಾರ್ವಜನಿಕರ ಮೇಲೆ ಇದು ಹೊರೆಯಾಗಿದೆ. ಈ ಕೂಡಲೇ, ಕೇಂದ್ರ ಸರ್ಕಾರ ಜನರ ಪರಿಸ್ಥಿತಿ ಮನಗಂಡು ಅಗತ್ಯ ವಸ್ತುಗಳ ಜೊತೆಯಲ್ಲಿ, ತೈಲ ಬೆಲೆ ಇಳಿಕೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದ್ದಾರೆ. ಈಗಾಗಲೇ, ಜನರು ಕೊರೊನಾ ಸಂಕಷ್ಟದಲ್ಲಿದ್ದು, ಜನರಿಗೆ ಸಾಂತ್ವಾನ ಹೇಳಿ ಅಂತಾ ಮನವಿ ಮಾಡಿಕೊಂಡಿದ್ದಾರೆ.