ಮಂಡ್ಯ: ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಾಜಿ ಶಾಸಕ ಮತ್ತು ಬೆಂಬಲಿಗರು ಜೆಸಿಬಿ ಚಾಲಕನನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಅರಕೆರೆ ಗ್ರಾಮದ ರಸ್ತೆ ಅಗಲೀಕರಣ ಕಾಮಗಾರಿಗಾಗಿ, PWD ಇಲಾಖೆಗೆ ಸೇರಿದ ಜಾಗದ ಒತ್ತುವರಿ ಕಾರ್ಯಾಚರಣೆ ನಡೆಯುತ್ತಿತ್ತು.
ಈ ಒತ್ತುವರಿ ತೆರವು ಕಾರ್ಯಾಚರಣೆಗಾಗಿ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅನುಮತಿಯನ್ನೂ ಪಡೆಯಲಾಗಿತ್ತು.
ಒತ್ತುವರಿ ತೆರವಿಗಾಗಿ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೂಡ ಮಾಡಲಾಗಿತ್ತು.
ಅಧಿಕಾರಿಗಳ ಸೂಚನೆಯಂತೆ ಜೆಸಿಬಿ ಚಾಲಕ ಅರಕೆರೆ ಗ್ರಾಮದಲ್ಲಿದ್ದ ಒತ್ತುವರಿ ಜಾಗವನ್ನ ತೆರವುಗೊಳಿಸುತ್ತಿದ್ದನು.
ಈ ವೇಳೆ ಏಕಾಏಕಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮತ್ತು ಬೆಂಬಲಿಗರು ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.
ಜೆಸಿಬಿ ನಿಲ್ಲಿಸಿ, ಕಲ್ಲೇಟಿನಿಂದ ಬಚಾವಾಗಲು ಜೆಸಿಬಿಯಿಂದ ಕೆಳಗಿಳಿದು ಓಡಲು ಚಾಲಕ ಯತ್ನಿಸಿದ್ದಾನೆ.
ಈ ವೇಳೆ ಸ್ವತಃ ಮಾಜಿ ಶಾಸಕರೇ ಚಾಲಕನನ್ನ ಅಟ್ಟಾಡಿಸಿ ಹಿಡಿದು, ಹಲ್ಲೆ ನಡೆಸಿದ್ದಲ್ದೆ, ಬೆಂಬಲಿಗರನ್ನೂ ಪ್ರಚೋದಿಸಿ ಹಲ್ಲೆ ಮಾಡಿಸಿದ್ದಾರೆ.
ಬಂದೋ ಬಸ್ತ್ ನಲ್ಲಿದ್ದ ಪೊಲೀಸರು ಕೂಡ ಚಾಲಕನನ್ನ ರಕ್ಷಣೆ ಮಾಡದೆ, ಮಾಜಿ ಶಾಸಕ ಮತ್ತು ಬೆಂಬಲಿಗರ ವರ್ತನೆಯನ್ನ ಕಂಡು ಮೂಕ ಪ್ರೇಕ್ಷಕರಾದರು.
ಮಾಜಿ ಶಾಸಕರು ತಮ್ಮ ಬೆಂಬಲಿಗರ ಮನೆಯನ್ನ ಪೂರ್ವಾನುಮತಿ ಇಲ್ಲದೆ ತೆರವುಗೊಳಿಸೋದನ್ನ ವಿರೋಧಿಸಿದ್ದಾರೆ ಅಂತಾ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬೆಂಬಲಿಗರು ಹೇಳ್ತಿದ್ದಾರೆ.
ಆದರೆ, ಅದನ್ನ ಪ್ರಶ್ನೆ ಮಾಡೋಕೂ, ಕೇಳೋಕೂ ಕಾನೂನು ಬದ್ಧವಾದ ದಾರಿಗಳಿವೆ. ಆದರೂ, ಕಾನೂನು ಮೀರಿ ಚಾಲಕನ ಮೇಲೆ ಗೂಂಡಾ ರೀತಿ ಅಟ್ಟಾಡಿಸಿ ಹಲ್ಲೆ ಮಾಡೋದು ಎಷ್ಟು ಸರಿ ಅನ್ನೋದು ಮತ್ತೊಂದು ಗುಂಪಿನ ವಾದ.
ಏನೇ ಆಗ್ಲೀ, ರಾಜಕೀಯ ವೈಷಮ್ಯ ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಈ ರೀತಿ ವರ್ತನೆ ಎಷ್ಟು ಸರಿ. ಪ್ರಜ್ಞಾವಂತ ಮಾಜಿ ಶಾಸಕರೇ ಗ್ರಾಮದ ಅಭಿವೃದ್ಧಿಗೆ ತೊಡಕಾದರೆ ಹೇಗೆ ಅನ್ನೋ ಚರ್ಚೆ ಕ್ಷೇತ್ರದಾದ್ಯಂತ ಶುರುವಾಗಿದೆ..
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.